ADVERTISEMENT

ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಯತ್ನ

ಮಂಗಳೂರು ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:56 IST
Last Updated 7 ಜುಲೈ 2017, 19:56 IST
ಮಂಗಳೂರಿನ ಅಡ್ಯಾರ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌  ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಬಿ.ರಮಾನಾಥ ರೈ, ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಪರಸ್ಪರ ತಮಾಷೆಯಲ್ಲಿ ತೊಡಗಿದ್ದರು      – ಪ್ರಜಾವಾಣಿ ಚಿತ್ರ
ಮಂಗಳೂರಿನ ಅಡ್ಯಾರ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಬಿ.ರಮಾನಾಥ ರೈ, ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಪರಸ್ಪರ ತಮಾಷೆಯಲ್ಲಿ ತೊಡಗಿದ್ದರು – ಪ್ರಜಾವಾಣಿ ಚಿತ್ರ   

ಮಂಗಳೂರು: ‘ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟು ಕೊಂಡು ಹಿಂದೂ ಮತಗಳನ್ನು ಧ್ರುವೀಕರಣ ಮಾಡುವ ದುರುದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ನಗರದ ಹೊರವಲಯದ ಅಡ್ಯಾರ್‌ನಲ್ಲಿ ಶುಕ್ರವಾರ ನಡೆದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಕಾಂಗ್ರೆಸ್‌ ಚುನಾಯಿತ ಪ್ರತಿನಿಧಿಗಳು ಮತ್ತು ಪ್ರಮುಖ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚುನಾವಣೆ ಎದುರಿಸಲು ಬಿಜೆಪಿ ಬಳಿ ಯಾವುದೇ ವಿಷಯಗಳಿಲ್ಲ. ಕೋಮು ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಇದೇ ಕಾರಣಕ್ಕಾಗಿ ಮತೀಯ ದ್ವೇಷದ ಘರ್ಷಣೆಗಳು ನಡೆಯುತ್ತಿವೆ’ ಎಂದರು.

2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಲ್ಲಿ ಬಿಜೆಪಿಯವರು ಚರ್ಚ್‌ಗಳ ಮೇಲೆ ದಾಳಿ ಮಾಡಿದ್ದರು. ಈಗಲೂ ಮತ್ತೆ ಮತ್ತೆ ಅದನ್ನೇ ಮಾಡಲು ಹೊರಟಿದ್ದಾರೆ. ಇಂತಹ ಪ್ರಯತ್ನಗಳಿಗೆ ಕರಾವಳಿಯ ಜನರು ಬೆಂಬಲ ನೀಡಬಾರದು. ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಬಿಜೆಪಿಯ ಕೋಮುವಾದಿ ಕಾರ್ಯಸೂಚಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.

‘ಬಂಟ್ವಾಳದಲ್ಲಿ ನಡೆಯುತ್ತಿರುವ ಕೊಲೆ, ಗಲಭೆಗಳಿಗೆ ರಾಜಕೀಯ ದುರುದ್ದೇಶವಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕೋಮು ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವವರ ಮನೆಯ ಮಕ್ಕಳು ಗಲಭೆಗಳಲ್ಲಿ ಸಾಯುವುದಿಲ್ಲ. ಬಡವರು, ಹಿಂದುಳಿದವರ ಮಕ್ಕಳು ಹಿಂಸೆಗೆ ಬಲಿಯಾಗುತ್ತಾರೆ. ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವವರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ’ ಎಂದು ಹೇಳಿದರು.

‘ಇವರು ಅಧಿಕಾರದಲ್ಲಿ ಇದ್ದಾಗ ಕಮಿಷನ್ ಆಸೆಗಾಗಿ ಸೈಕಲ್‌, ಸೀರೆ ಹಂಚಿದ್ದು ಬಿಟ್ಟರೆ ಏನೂ ಮಾಡಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಚುನಾವಣೆ ಎದುರಿಸಲಾಗದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಾರಕ್ಕೆ ಕರೆತರಲು ಬಿಜೆಪಿ ಹೊರಟಿದೆ. ಹಿಂದುತ್ವದ ವಿಚಾರಧಾರೆ ಬಳಸಿಕೊಂಡು ಜನರನ್ನು ಕೆರಳಿಸಿ ಅಧಿಕಾರಕ್ಕೆ ಬರಲು ಇದು ಉತ್ತರ ಪ್ರದೇಶ ಅಲ್ಲ, ಕರ್ನಾಟಕ. ಇಲ್ಲಿ ಕೋಮುದ್ವೇಷದ ಬೀಜ ಬಿತ್ತಿ, ಅದರ ಫಲ ಪಡೆಯಲು ಬಿಜೆಪಿ ಅಥವಾ ಪಿಎಫ್‌ಐಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.