ADVERTISEMENT

ಕೋಲಾರ: ಪೋಷಕರಿಂದ ಪ್ರಿಯಕರನ ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಥಳಿತ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 14:23 IST
Last Updated 22 ಏಪ್ರಿಲ್ 2017, 14:23 IST
ಕೋಲಾರ: ಪೋಷಕರಿಂದ ಪ್ರಿಯಕರನ ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಥಳಿತ
ಕೋಲಾರ: ಪೋಷಕರಿಂದ ಪ್ರಿಯಕರನ ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಥಳಿತ   

ಕೋಲಾರ: ಮಗಳ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಪೋಷಕರು ಹಾಗೂ ಕುಟುಂಬ ಸದಸ್ಯರು ಆಕೆಯ ಪ್ರಿಯಕರನನ್ನು ನಗರದಲ್ಲಿ ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಗಲ್‌ಪೇಟೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ನಗರದ ದರ್ವೇಶ್‌ ಮೊಹಲ್ಲಾ ಬಡಾವಣೆಯ ಯುವಕ ಇಮ್ರಾನ್‌ ತನ್ನ ಮನೆಯ ಸಮೀಪವೇ ವಾಸವಿರುವ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಯುವತಿ ಸಹ ಆತನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಯುವತಿಯ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೂ ಇಮ್ರಾನ್‌ ಮತ್ತು ಯುವತಿ ಪೋಷಕರ ಕಣ್ತಪ್ಪಿಸಿ ಆಗಾಗ್ಗೆ ಭೇಟಿಯಾಗುತ್ತಿದ್ದರು. ಇಮ್ರಾನ್‌ ಯುವತಿಯ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದ. ಈ ವಿಷಯ ಗೊತ್ತಾಗಿ ಕೋಪಗೊಂಡಿದ್ದ ಯುವತಿಯ ತಂದೆ, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಗುರುವಾರ (ಏ.20) ಇಮ್ರಾನ್‌ನನ್ನು ನಗರಸಭೆ ಬಳಿಗೆ ಎಳೆದೊಯ್ದು ಬಟ್ಟೆಗಳನ್ನು ಹರಿದು ವಿವಸ್ತ್ರಗೊಳಿಸಿದ್ದಾರೆ. ಅಲ್ಲದೇ, ನೆಲದ ಮೇಲೆ ಉರುಳಾಡಿಸಿ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಇಮ್ರಾನ್‌ ಅಂಗಲಾಚಿ ಕ್ಷಮೆ ಕೇಳಿದರೂ ಬಿಡದ ಯುವತಿಯ ಕುಟುಂಬ ಸದಸ್ಯರು ಆತನನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಶುಕ್ರವಾರ ಸಂಜೆ ಇಮ್ರಾನ್‌ ಕಡೆಯವರು ನಗರದ ಅಮ್ಮವಾರಿಪೇಟೆ ವೃತ್ತದ ಸಮೀಪ ಇರುವ ಯುವತಿಯ ತಂದೆ ಮತ್ತು ಸಂಬಂಧಿಕರ ಹಣ್ಣಿನ ಅಂಗಡಿಗಳ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದೆವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಮ್ರಾನ್‌, ಮಾಂಸದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಹಲ್ಲೆ ಸಂಬಂಧ ಅವರು ಯುವತಿಯ ಕುಟುಂಬ ಸದಸ್ಯರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಹಲ್ಲೆ, ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಅಶ್ಫಕ್‌, ಹಬೀಬ್‌, ಇರ್ಫಾನ್‌ ಮತ್ತು ರಿಜ್ವಾನ್‌ ಎಂಬುವರನ್ನು ಶನಿವಾರ ಬಂಧಿಸಿದ್ದಾರೆ.

ಮೊಬೈಲ್‌ನಲ್ಲಿ ಸೆರೆ: ಯುವತಿಯ ಕುಟುಂಬ ಸದಸ್ಯರು ಇಮ್ರಾನ್‌ ಮೇಲೆ ಹಲ್ಲೆ ನಡೆಸಿದ ಘಟನಾವಳಿಯನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸ್‌ಆ್ಯಪ್‌ಗೆ ಹಾಕಿದ್ದಾರೆ. ಸುಮಾರು 3 ನಿಮಿಷದ ಈ ದೃಶ್ಯಾವಳಿಯು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿದ್ದು, ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.