ADVERTISEMENT

ಕ್ರಿಕೆಟ್‌: ದಾಖಲೆ ವಿದ್ಯುತ್ ಬಳಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಗುರುವಾರ ನಡೆದ ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್  ಪಂದ್ಯವನ್ನು ರಾಜ್ಯದ ಎಲ್ಲೆಡೆ ಹೆಚ್ಚು ಜನ ನೋಡಿದ ಕಾರಣ ದಾಖಲೆ ಪ್ರಮಾಣದ ವಿದ್ಯುತ್ ಬಳಕೆ ಆಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಶುಕ್ರವಾರ ಇಲ್ಲಿ ತಿಳಿಸಿದರು.

‘ಸಾಮಾನ್ಯ ದಿನಗಳಲ್ಲಿ ಸರಾಸರಿ 20.5 ಲಕ್ಷ ಯೂನಿಟ್ ಬಳಕೆ ಆಗುತ್ತಿತ್ತು. ಆದರೆ, ಗುರುವಾರ ಕ್ರಿಕೆಟ್ ಇದ್ದ ಕಾರಣ 21.1 ಲಕ್ಷ ಯೂನಿಟ್ ಬಳಕೆಯಾಗಿದ್ದು, ಇದುವರೆಗಿನ ಅತಿ ಹೆಚ್ಚು ವಿದ್ಯುತ್ ಬಳಕೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಬೇಡಿಕೆ ಹೆಚ್ಚಾಗುವ ಬಗ್ಗೆ ಮುನ್ಸೂಚನೆ ಇದ್ದ ಕಾರಣ ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.  ಎಲ್ಲಿಯೂ ವಿದ್ಯುತ್ ಕೈಕೊಡದಂತೆ ಎಚ್ಚರವಹಿಸಲಾಗಿತ್ತು. ಹೆಚ್ಚುವರಿ ಬೇಡಿಕೆಯನ್ನು ಜಲವಿದ್ಯುತ್ ಉತ್ಪಾದನೆ ಮೂಲಕ ಸರಿದೂಗಿಸಲಾಯಿತು. ಜಲ ವಿದ್ಯುತ್‌ ಮೂಲದಿಂದಲೇ 51.05 ದಶಲಕ್ಷ ಯೂನಿಟ್‌ ಉತ್ಪಾದಿಸಲಾಯಿತು’ ಎಂದು ಅವರು ವಿವರಿಸಿದರು.

ರೈತರ ಜತೆ ಸಂವಾದ: ನೀರು ಮತ್ತು ವಿದ್ಯುತ್‌ನ ಸದ್ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂಧನ ಇಲಾಖೆ ಶನಿವಾರ (ಮಾ.28) ‘ರೈತರ ರಕ್ಷಿಸಿ, ವಿದ್ಯುತ್ ಉಳಿಸಿ’ ಸಂವಾದವನ್ನು ನಗರದ ಜ್ಞಾನಭಾರತಿ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಸಚಿವರು ತಿಳಿಸಿದರು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ನಾಯಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.