ADVERTISEMENT

ಖಾಸಗಿ ವಿಶ್ವವಿದ್ಯಾಲಯಗಳೇ ಮೊದಲು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2017, 19:30 IST
Last Updated 31 ಮಾರ್ಚ್ 2017, 19:30 IST
ಖಾಸಗಿ ವಿಶ್ವವಿದ್ಯಾಲಯಗಳೇ ಮೊದಲು
ಖಾಸಗಿ ವಿಶ್ವವಿದ್ಯಾಲಯಗಳೇ ಮೊದಲು   

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಅಂಕ ನೀಡಲಾಗಿದೆ. ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಸಾಮಾನ್ಯ ವಿಶ್ವವಿದ್ಯಾಲಯಗಳು ಈ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿವೆ.

ದೇಶದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಗುಣಮಟ್ಟ ಅಳೆದು ಅಂಕ ನೀಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಯಾಂಕ ಚೌಕಟ್ಟು’ (ಕೆಎಸ್‌ಯುಆರ್‌ಎಫ್‌) ಸಿದ್ಧಪಡಿಸಿದೆ.
ವಿಶ್ವವಿದ್ಯಾಲಯಗಳಿಗೆ ನೀಡಲಾದ ಅಂಕಗಳ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಶುಕ್ರವಾರ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಸರ್ಕಾರಿ, ಡೀಮ್ಡ್‌, ಖಾಸಗಿ ಸೇರಿ 52 ವಿಶ್ವವಿದ್ಯಾಲಗಳಿವೆ. ಅದರಲ್ಲಿ 40 ವಿಶ್ವವಿದ್ಯಾಲಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 38 ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಅಂಕಪಟ್ಟಿ ಪ್ರಕಟಿಸಿದ್ದು, ಕರ್ನಾಟಕ ಮತ್ತು  ಕುವೆಂಪು ವಿಶ್ವವಿದ್ಯಾಲಗಳ ವರದಿ ಇನ್ನಷ್ಟೇ ಸಿದ್ಧವಾಗಬೇಕಿದೆ. ‘ಐ ಕೇರ್‌ ರೇಟಿಂಗ್ಸ್‌’ ಎಂಬ ಖಾಸಗಿ ಸಂಸ್ಥೆ ಸಮೀಕ್ಷೆ ನಡೆಸಿದೆ.

ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆ, ಹೊಸ ಆವಿಷ್ಕಾರಗಳು, ಬೋಧನಾ ಗುಣಮಟ್ಟ ಮತ್ತು ಸಿಬ್ಬಂದಿ ಸಂಖ್ಯೆ, ಮೂಲಸೌಕರ್ಯ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಎಂಬ ವಿಷಯಗಳ ಕುರಿತು ಸಮೀಕ್ಷೆ ನಡೆಸಲಾಗಿದೆ. ಗರಿಷ್ಠ 5 ಸ್ಟಾರ್‌ ಮತ್ತು 1,000 ಅಂಕದ ಮಿತಿಯೊಳಗೆ ಆಯಾ ವಿಶ್ವವಿದ್ಯಾಲಯ ಎಷ್ಟು ಸ್ಟಾರ್‌ ಮತ್ತು ಅಂಕ ಗಳಿಸಿದೆ ಎಂಬುದನ್ನು ವಿವರಿಸಲಾಗಿದೆ.

ADVERTISEMENT

ಖಾಸಗಿ ವಿ.ವಿಗಳೇ ಮೊದಲು: 10 ವರ್ಷಕ್ಕಿಂತ ಹಿಂದೆ ಆರಂಭವಾದ  ಎಂಟು ವಿಶ್ವವಿದ್ಯಾಲಯಗಳಿದ್ದು, ಮಣಿಪಾಲ್‌ ವಿ.ವಿ 737 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗುಲ್ಬರ್ಗ ವಿವಿ (557) ಮತ್ತು ಕೊನೆಯ ಸ್ಥಾನದಲ್ಲಿ ಮಂಗಳೂರು ವಿವಿ (428) ಇದೆ.
ಐದರಿಂದ ಹತ್ತು ವರ್ಷದೊಳಗೆ ಸ್ಥಾಪನೆಯಾದ ವಿ.ವಿಗಳ ಪಟ್ಟಿಯಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ (711) ಮೊದಲ ಸ್ಥಾನದಲ್ಲಿದೆ.  ಎರಡನೇ ಸ್ಥಾನದಲ್ಲಿ ಜೈನ್‌ ವಿಶ್ವವಿದ್ಯಾಲಯ (661) ಇದ್ದರೆ, ದಾವಣಗೆರೆ ವಿ.ವಿ ಕೊನೆಯ ಸ್ಥಾನ  (279)  ಪಡೆದಿದೆ. 5 ವರ್ಷದೊಳಗಿನ ವಿ.ವಿಗಳ ಪಟ್ಟಿಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಪ್ರಥಮ (617) ಮತ್ತು ರೈ ಟೆಕ್ನಾಲಜಿ ವಿ.ವಿ ಕೊನೆಯ (305) ಸ್ಥಾನದಲ್ಲಿದೆ.

ವಿಷಯಾಧಾರಿತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಧಾರವಾಡದ ಕೃಷಿ ವಿ.ವಿ ಪ್ರಥಮ (779), ಬೀದರ್‌ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದ್ವಿತೀಯ (656) ಹಾಗೂ  ಜಾನಪದ ವಿಶ್ವವಿದ್ಯಾಲಯ ಕೊನೆ (289) ಸ್ಥಾನದಲ್ಲಿದೆ.

ವಿಷಯಾಧಾರಿತ ವಿ.ವಿಗಳಿಗೆ ಹಿನ್ನಡೆ: ಸರ್ಕಾರ ಈಚೆಗೆ ವಿಷಯಾಧಾರಿತ ವಿಶ್ವವಿದ್ಯಾಲಯಗಳನ್ನು ಹೆಚ್ಚಿಗೆ ಆರಂಭಿಸಿದೆ. ಅದರಲ್ಲಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಬೋಧನೆ, ಮೂಲಸೌಕರ್ಯ, ಸಂಶೋಧನೆ ಮತ್ತು ಆವಿಷ್ಕಾರ ನಡೆಯದಿರುವುದು ಸಮೀಕ್ಷೆಯ ಮೂಲಕ ಕಂಡುಬಂದಿದೆ.

ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಕನ್ನಡ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮತ್ತು ಸಂಸ್ಕೃತ ವಿಶ್ವವಿದ್ಯಾಲಯಗಳು ಶೂನ್ಯ ಸಾಧನೆ ಮಾಡಿವೆ. ಮೂಲ ಸೌಕರ್ಯದಲ್ಲೂ ಸಂಸ್ಕೃತ ಮತ್ತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಗಳು ‘0’ ಸ್ಟಾರ್ ಪಡೆದಿವೆ. ಜಾನಪದ ವಿಶ್ವವಿದ್ಯಾಲಯದಕ್ಕೆ ಬೋಧನೆ ಗುಣಮಟ್ಟ ಮತ್ತು
ಆವಿಷ್ಕಾರಕ್ಕೆ ಕೇವಲ 1 ಸ್ಟಾರ್‌ ಬಂದಿದೆ.

ವಿಶ್ವವಿದ್ಯಾಲಯಗಳಿಗೆ ಅಂಕ ನೀಡಿದ ಮೊದಲ ರಾಜ್ಯ ಕರ್ನಾಟಕ. ಇದರಿಂದ ಯಾವ ವಿಶ್ವವಿದ್ಯಾಲಯಕ್ಕೆ ಏನು ಅಗತ್ಯವಿದೆ ಎಂದು ಗೊತ್ತಾಗುತ್ತದೆ

ಬಸವರಾಜ ರಾಯರಡ್ಡಿ
ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.