ADVERTISEMENT

ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 9:05 IST
Last Updated 28 ಫೆಬ್ರುವರಿ 2017, 9:05 IST
ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು
ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು   
ಕೆಜಿಎಫ್‌: ರಾಬರ್ಟಸನ್‌ ಪೇಟೆಯ ಗುರುಭವನದ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಕುಳಿತ ಭಂಗಿಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. 
 
ಪ್ರತಿಮೆಗೆ ಸೂಕ್ತ ಭದ್ರತೆ ಇಲ್ಲದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ಈಚೆಗೆ ಪ್ರತಿಮೆಗೆ ಬಟ್ಟೆ ಸುತ್ತಿದ್ದರು.  ಆದರೆ ಕಿಡಿಗೇಡಿಗಳು ಬಟ್ಟೆಯನ್ನು ತೆಗೆದು ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಪ್ರತಿಮೆಯ ಮೂಗಿನ ಭಾಗವನ್ನು ಕಿತ್ತು ಹಾಕಲಾಗಿದೆ. ಕೈ ಬೆರಳಿನ ಭಾಗದಲ್ಲಿ ಸಹ ಕೆತ್ತಲಾಗಿದೆ. 
 
ನಗರದಲ್ಲಿ ಈ ಹಿಂದೆ ಪ್ರಸಿದ್ಧವಾಗಿದ್ದ ಡಿಸಿಎಂ ಸ್ಕೂಲ್‌ ಈ ಭಾಗದಲ್ಲಿ ಇತ್ತು. ಅಂದಿನ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರಪಿತ ಗಾಂಧಿ ಪ್ರತಿಮೆಯನ್ನು ಶಾಲೆ ಅವರಣದಲ್ಲಿ ಸ್ಥಾಪಿಸಬೇಕು ಎಂದು 1969ರಲ್ಲಿ ಪ್ರತಿಮೆ ಸ್ಥಾಪಿಸಿದ್ದರು. ಶಾಲೆ ಆವರಣದಲ್ಲಿಯೇ ಇದ್ದ ಗಾಂಧಿ ಪ್ರತಿಮೆ ಸುರಕ್ಷಿತವಾಗಿಯೇ ಇದ್ದಿತ್ತು. ಆದರೆ ಒಂದು ದಶಕದ ಹಿಂದೆ ಡಿಸಿಎಂ ಶಾಲೆ ಮುಚ್ಚಲ್ಪಟ್ಟಾಗ, ಅಲ್ಲಿ ಪುನಃ ಶಾಲೆ ನಿರ್ಮಾಣ ಮಾಡುವ ಬದಲು ಶಿಕ್ಷಣ ಇಲಾಖೆ ಆ ಜಾಗವನ್ನು ಶಿಕ್ಷಕರಿಗೆ ಗುರುಭವನ ನಿರ್ಮಾಣ ಮಾಡಲು ನೀಡಿತು.
 
ಜಾಗವನ್ನು ವಶಕ್ಕೆ ತೆಗೆದುಕೊಂಡು ಶಿಕ್ಷಕರ ಸಮುದಾಯ ಒಂದು ದಶಕದಿಂದ ಗುರುಭವನವನ್ನು ಆಮೆ ವೇಗದಲ್ಲಿ ಕಟ್ಟುತ್ತಲೇ ಬಂದಿದೆ. ಇದುವರೆವಿಗೂ ಸಂಪೂರ್ಣವಾಗದ ಕಾರಣ, ಪ್ರಸ್ತುತ ಕಟ್ಟಡ ಅನೈತಿಕ ಚಟುವಟಿಕೆಗಳಿಗೆ ಕೇಂದ್ರವಾಗಿದೆ. ರಾತ್ರಿ ಹೊತ್ತು ಬರುವ ಪುಂಡರು ಇಂತಹ ಚಟುವಟಿಕೆಗಳ ಜೊತೆಗೆ ಗಾಂಧಿ ಪ್ರತಿಮೆಗೂ ಜಖಂ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
 
ಗುರುಭವನದ ಸುತ್ತಲೂ ಕಸಕಡ್ಡಿಗಳ ರಾಶಿ ಬಿದ್ದಿದೆ. ಸುತ್ತಮುತ್ತಲಿನ ನಿವಾಸಿಗಳು ಸಹ ಕಸವನ್ನು ಇಲ್ಲಿಯೇ ಹಾಕುತ್ತಿದ್ದಾರೆ. ಇಲ್ಲಿ ಶಾಲೆ ಇಲ್ಲದ ಕಾರಣ ಶಿಕ್ಷಣ ಇಲಾಖೆ ಉಸ್ತುವಾರಿ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಎರಡು ಬಾರಿ ಗುರುಭವನದ ಸುತ್ತಲೂ ಕಾಂಪೌಂಡ ನಿರ್ಮಾಣ ಮಾಡಿಕೊಡಬೇಕು ಎಂದು ನಗರಸಭೆಗೆ ಪತ್ರದ ಮೂಲಕ ಕೋರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ತಿಳಿಸಿದ್ದಾರೆ.
 
**
ಗಾಂಧಿ ಪ್ರತಿಮೆ ವಿರೂಪ ಮಾಡಿರುವ ಸುದ್ದಿ ತಿಳಿದಿದೆ. ಕೂಡಲೇ ಮಹಾತ್ಮರ ವಿಗ್ರಹಕ್ಕೆ ಸೂಕ್ತ ಬಂದೋಬಸ್ತ್‌ ಮಾಡಲಾಗುವುದು.
-ಶ್ರೀಕಾಂತ್‌, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.