ADVERTISEMENT

ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನ ಕುಮಾರಿ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:44 IST
Last Updated 13 ಏಪ್ರಿಲ್ 2017, 6:44 IST
ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನ ಕುಮಾರಿ ಗೆಲುವು
ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನ ಕುಮಾರಿ ಗೆಲುವು   

ಗುಂಡ್ಲುಪೇಟೆ: ಗುಂಡ್ಲುಪೇಟೆ  ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್) ಅವರು ಜಯಭೇರಿ ಬಾರಿಸಿದ್ದಾರೆ. ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ಕ್ಷೇತ್ರ  ತೆರವಾಗಿತ್ತು.

ಈ ಉಪಚುನಾವಣೆಯನ್ನು ಮುಂದಿನ ವರ್ಷ ರಾಜ್ಯ ವಿಧಾನ ಸಭೆ ಚುನಾವಣೆಗೆ ನಡೆಯುವ ದಿಕ್ಸೂಚಿ ಎಂದು ಬಿಂಬಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದರು.

ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಅವರಿಗೆ ಮುನ್ನಡೆ ಲಭಿಸಲಿಲ್ಲ. ಅಚಿತಿಮವಾಗಿ ಮೋಹನ್‌ಕುಮಾರಿ ಅವರು ಗೆಲುವಿನ ನಗೆ ಬೀರಿದರು.

ADVERTISEMENT

ಗುಂಡ್ಲುಪೇಟೆ ಅಂತಿಮ ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು, 10,877 ಮತಗಳ ಅಂತರದಿಂದ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಮತಗಳು: ಕಾಂಗ್ರೆಸ್ 90258, ಬಿಜೆಪಿ 79381. ನೋಟಾ 1596.

ಮಹದೇವಪ್ರಸಾದ್ ಅವರ ನಿಧನದಿಂದ ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದ ಅನುಕಂಪದ ಅಲೆ ಮತ್ತು ಸಿದ್ದರಾಮಯ್ಯ ನೇತೃತ್ವದಡಿ ಆ ಪಕ್ಷದ ವರಿಷ್ಠರ ಭರ್ಜರಿ ಪ್ರಚಾರಕ್ಕೆ ಈಗ ಫಲ ಸಿಕ್ಕಿದೆ.ಯಡಿಯೂರಪ್ಪ ಅವರ ನೇತೃತ್ವದಡಿ ಕಮಲ ಪಾಳಯದ ವರಿಷ್ಠರು ನಡೆಸಿ ಪ್ರಯತ್ನ ಫಲ ನೀಡಿಲ್ಲ. ಯಡಿಯೂರಪ್ಪ ಅವರ ಪ್ರಚಾರದಿಂದ ಕ್ಷೇತ್ರದಲ್ಲಿರುವ ಬಹುಸಂಖ್ಯಾತ ಲಿಂಗಾಯತ ಮತಗಳು ಬಿಜೆಪಿಯತ್ತ ವಾಲುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಬಿಜೆಪಿಯ ಯಾವುದೇ ಸೂತ್ರ ಕ್ಷೇತ್ರದ ಮತದಾರರ ಮೇಲೆ ಪರಿಣಾಮ ಬೀರಿಲ್ಲ.

ಬಿಜೆಪಿಗೆ ತಕ್ಕ ಪಾಠ :ಮೋಹನ್‌ಕುಮಾರಿ
ಚುನಾವಣೆ ಪ್ರಚಾರದ ವೇಳೆ ಬಿಜೆಪಿಯ ಕೆಲವು ಮುಖಂಡರು ನನ್ನ ವಿರುದ್ಧ ಅಸಂಬಂದ್ಧವಾಗಿ ಮತನಾಡಿದರು.ಈ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಮೋಹನ ಕುಮಾರಿ ಹೇಳಿದರು.
ಮತ ಎಣಿಕೆ ಕೇಂದ್ರದ ಆವರಣಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವ ವಿದೆ. ಸಂಸ್ಕೃತಿಯ ಅರಿವಿನ ಕೊರತೆಯಿಂದ ನನ್ನ ವಿರುದ್ಧ ಸಂಸದರೊಬ್ಬರು ಟೀಕೆ ಮಾಡಿದ್ದರು.ಕ್ಷೇತ್ರದ ಮತದಾರರೇ ಅವರಿಗೆ ಈಗ ಉತ್ತರ ನೀಡಿದ್ದಾರೆ.ಅವರನ್ನು ನಾನು ಕ್ಷಮಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.