ADVERTISEMENT

ಗುಜರಾತ್ ಕಾಂಗ್ರೆಸ್‌ ಶಾಸಕರಿಗೆ ಬಿಡದಿಯಲ್ಲಿ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2017, 4:37 IST
Last Updated 29 ಜುಲೈ 2017, 4:37 IST
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವ ಮುನ್ನ ವರದಿಗಾರರ ಜತೆ ಮಾತನಾಡಿದ ಗುಜರಾತ್ ಶಾಸಕ ಶೇಲೇಶ್ ಪರ್ಮಾರ್ (ಎಎನ್‌ಐ ಟ್ವಿಟರ್ ಚಿತ್ರ)
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವ ಮುನ್ನ ವರದಿಗಾರರ ಜತೆ ಮಾತನಾಡಿದ ಗುಜರಾತ್ ಶಾಸಕ ಶೇಲೇಶ್ ಪರ್ಮಾರ್ (ಎಎನ್‌ಐ ಟ್ವಿಟರ್ ಚಿತ್ರ)   

ರಾಮನಗರ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಆಪರೇಷನ್ ಕಮಲ’ ಭೀತಿಯಿಂದ ಕಾಂಗ್ರೆಸ್‌ ಹೈಕಮಾಂಡ್‌ ಕರ್ನಾಟಕಕ್ಕೆ ಕಳುಹಿಸಿಕೊಟ್ಟಿರುವ ಗುಜರಾತ್ ಶಾಸಕರಿಗೆ ಬಿಡದಿಯಲ್ಲಿರುವ ಈಗಲ್‌ಟನ್ ರೆಸಾರ್ಟ್‌ನಲ್ಲಿ ಆತಿಥ್ಯ ಕಲ್ಪಿಸಲಾಗಿದೆ.

ಅಹಮದಾದ್‌ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಬಂದ ಶಾಸಕರು ಶನಿವಾರ ಮುಂಜಾನೆ 4.20ರ ಸುಮಾರಿಗೆ ಬಿಡದಿಯಲ್ಲಿರುವ ಈಗಲ್‌ಟನ್ ರೆಸಾರ್ಟ್ ಪ್ರವೇಶಿಸಿದರು.

ಈಗಲ್‌ಟನ್ ರೆಸಾರ್ಟಿನಲ್ಲಿ ಸದ್ಯ ಗುಜರಾತಿನ 38 ಕಾಂಗ್ರೆಸ್ ಶಾಸಕರು ಬೀಡು ಬಿಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ಈ ಎಲ್ಲ ಶಾಸಕರ ಆತಿಥ್ಯದ ಉಸ್ತುವಾರಿ ಹೊತ್ತಿದ್ದಾರೆ. ರೆಸಾರ್ಟಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಅವರಿಗೆ ಸಾಥ್ ನೀಡಿದ್ದಾರೆ.

ADVERTISEMENT

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಆಗಸ್ಟ್‌ 8ರಂದು ಮತದಾನ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ  ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್  ಅವರು ಕಣದಲ್ಲಿದ್ದಾರೆ.

ಅಹ್ಮದ್‌ ಪಟೇಲ್‌ ಅವರನ್ನು ಸೋಲಿಸಲೇಬೇಕು ಎಂದು ಹಟ ತೊಟ್ಟಿರುವ ಅಮಿತ್‌ ಷಾ, ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಿ, ಆ ಪಕ್ಷದ ಬಲ ಕುಗ್ಗಿಸಲು ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕಾಂಗ್ರೆಸ್, ರೆಸಾರ್ಟ್ ರಾಜಕಾರಣದ ಮೊರೆಹೋಗಿದ್ದು, ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.