ADVERTISEMENT

ಗುಜರಾತ್ ಶಾಸಕರನ್ನು ಕಾಡಿದ ಅನಾರೋಗ್ಯ: ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2017, 19:57 IST
Last Updated 3 ಆಗಸ್ಟ್ 2017, 19:57 IST

ಬಿಡದಿ (ರಾಮನಗರ): ಈಗಲ್‌ಟನ್‌ ರೆಸಾರ್ಟ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದಾಗಿ ಇಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‌ ಶಾಸಕರು ಒತ್ತಡಕ್ಕೆ ಒಳಗಾಗಿದ್ದು, ಗುರುವಾರ ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನೂ ಪಡೆದರು.

ಶಾಸಕರಾದ ರಾಜೇಂದ್ರ ಸಿನ್ಹಾ , ಜೋಹಿತಾಬಾಯ್‌ ಪಟೇಲ್‌ ಸೇರಿದಂತೆ ಮೂವರು ಶಾಸಕರು ಬೆಳಿಗ್ಗೆ ಕೆಂಗೇರಿಯಲ್ಲಿರುವ ಬಿಜಿಎಸ್‌ ಅಪೋಲೊ ಆಸ್ಪತ್ರೆಗೆ ತೆರಳಿದರು.

ಒಬ್ಬರು ಎದೆನೋವಿನ ಕಾರಣ ಇಸಿಜಿ ಪರೀಕ್ಷೆಗೆ ಒಳಗಾದರೆ, ಉಳಿದ ಇಬ್ಬರು ಜ್ವರ ಹಾಗೂ ಅಧಿಕ ರಕ್ತದೊತ್ತಡಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆದರು. ತರುವಾಯ ಮೂವರೂ ರೆಸಾರ್ಟ್‌ಗೆ ಮರಳಿದರು.

ADVERTISEMENT

ಬಾಲಕೃಷ್ಣ ಭೇಟಿ: ಸಂಸದ ಡಿ.ಕೆ. ಸುರೇಶ್ ಇಡೀ ದಿನ ರೆಸಾರ್ಟ್‌ನಲ್ಲಿಯೇ  ಉಳಿದಿದ್ದರು. ಜೆಡಿಎಸ್‌ನ ಬಂಡಾಯ ಶಾಸಕ ಎಚ್.ಸಿ. ಬಾಲಕೃಷ್ಣ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.

ರೆಸಾರ್ಟ್‌ನ ಹೊರಗೆ ಪತ್ರಕರ್ತರ ಜೊತೆ ಮಾತನಾಡಿದ ಬಾಲಕೃಷ್ಣ  ‘ಸಚಿವ ಡಿ.ಕೆ. ಶಿವಕುಮಾರ್ ಮೇಲಿನ ಐ.ಟಿ. ದಾಳಿಯು ಅವರನ್ನು ಮಾನಸಿಕವಾಗಿ ಕುಗ್ಗಿಸುವ, ರಾಜಕೀಯ ಪ್ರೇರಿತ ದಾಳಿಯಾಗಿದೆ’ ಎಂದು ಟೀಕಿಸಿದರು.

‘ರೆಸಾರ್ಟಿನಲ್ಲಿ ಏನೂ ಸಿಗುವುದಿಲ್ಲ ಎಂದು ಐ.ಟಿ. ಅಧಿಕಾರಿಗಳಿಗೆ ಗೊತ್ತಿದ್ದೂ ಹೆದರಿಸುವ ಸಲುವಾಗಿ ದಾಳಿ ನಡೆಸಿದ್ದಾರೆ. ಈ ಮೂಲಕ ಹೆಚ್ಚು ಪ್ರಚಾರ ನೀಡಿ ಡಿ.ಕೆ. ಶಿವಕುಮಾರ್ ಅವರನ್ನು ಇಡೀ ದೇಶದಲ್ಲೇ ಹೀರೊ ಮಾಡಿದ್ದಾರೆ’ ಎಂದರು.

‘ರೆಸಾರ್ಟ್‌ ರಾಜಕಾರಣ ಕರ್ನಾಟಕಕ್ಕೆ ಹೊಸದೇನಲ್ಲ. ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರಬಹುದು ಎಂಬುದನ್ನು ಅವರು ಮರೆಯಬಾರದು’ ಎಂದು ಎಚ್ಚರಿಸಿದರು.

**

ಚಿತ್ರತಂಡ ತಂದ ಗೊಂದಲ

ಗುರುವಾರ ಬೆಳಿಗ್ಗೆ 8ರ ಸುಮಾರಿಗೆ ರೆಸಾರ್ಟ್‌ ಮುಂದೆ ಏಕಾಏಕಿ ಬಸ್‌ವೊಂದು ನಿಂತಿದ್ದು, ಶಾಸಕರನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ವದಂತಿ ಹಬ್ಬಿತ್ತು.

‘ರಾಜು ಕನ್ನಡ ಮೀಡಿಯಂ’ ಚಲನಚಿತ್ರದ ಚಿತ್ರೀಕರಣವು ರೆಸಾರ್ಟಿನ ಒಳಗೆ ನಡೆದಿದ್ದು, ನಟ ಸುದೀಪ್‌ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದರು. ಇಡೀ ತಂಡ ಕ್ಯಾರವಾನ್‌ ಬಸ್‌ ಹಾಗೂ 20ಕ್ಕೂ ಹೆಚ್ಚು ವಾಹನಗಳಲ್ಲಿ ರೆಸಾರ್ಟ್‌ ಪ್ರವೇಶಿಸಿತು. ಬಾಗಿಲಲ್ಲಿ ಅವರನ್ನು ತಡೆದ ಭದ್ರತಾ ಸಿಬ್ಬಂದಿ ಪ್ರಶ್ನಿಸತೊಡಗಿದರು. ಕಡೆಗೆ ಹೋಟೆಲ್‌ನ ಸಿಬ್ಬಂದಿ ಮಧ್ಯಪ್ರವೇಶಿಸಿ ಒಳಗೆ ಕರೆದೊಯ್ದರು. ರೆಸಾರ್ಟ್ ಒಳಗೆ ಸಂಜೆವರೆಗೂ ನಡೆದ ಚಿತ್ರೀಕರಣದಲ್ಲಿ ಸುದೀಪ್ ಪಾಲ್ಗೊಂಡರು.

‘ರೆಸಾರ್ಟ್‌ ರಾಜಕಾರಣ ಕರ್ನಾಟಕಕ್ಕೆ ಹೊಸದೇನಲ್ಲ. ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರಬಹುದು ಎಂಬುದನ್ನು ಅವರು ಮರೆಯಬಾರದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.