ADVERTISEMENT

ಗುಲ್ಬರ್ಗ ವಿ.ವಿ.ಯಲ್ಲಿ ಮಲ್ಲಮ್ಮನ ಅಧ್ಯಯನ ಪೀಠ

ಹೇಮರಡ್ಡಿ ಮಲ್ಲಮ್ಮನ ಜೀವನ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವ ರಾಯರಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2016, 19:30 IST
Last Updated 11 ಡಿಸೆಂಬರ್ 2016, 19:30 IST
ಬಾಗಲಕೋಟೆಯ  ಬಸವ ಸಭಾಭವನದಲ್ಲಿ ಭಾನುವಾರ ನಡೆದ ಮಲ್ಲಮ್ಮನ ಜೀವನ ಮತ್ತು ಸಾಧನೆ ಕುರಿತ ರಾಷ್ಟ್ರೀಯ ಸಮ್ಮೇಳನ ಹಾಗೂ ಚೈತನ್ಯ ಯಾತ್ರೆ ಸಮಾರೋಪ ಸಮಾರಂಭವನ್ನು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಡಾ.ಮಹಾಂತ ಸ್ವಾಮೀಜಿ, ವೇಮನಾನಂದ ಸ್ವಾಮೀಜಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಡಾ.ಶೇಖರಗೌಡ ಮಾಲಿ ಪಾಟೀಲ ಇದ್ದಾರೆ

ಕೂಡಲಸಂಗಮ (ಬಾಗಲಕೋಟೆ): ಲೌಕಿಕ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಅಲೌಕಿಕ ಸಾಧನೆ ಮಾಡಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಹೆಸರಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ  ಪ್ರಕಟಿಸಿದರು.
 
ಇಲ್ಲಿನ ಬಸವ ಸಭಾಭವನದಲ್ಲಿ ಭಾನುವಾರ ನಡೆದ ಮಲ್ಲಮ್ಮನ ಜೀವನ ಮತ್ತು ಸಾಧನೆ ಕುರಿತ ರಾಷ್ಟ್ರೀಯ ಸಮ್ಮೇಳನ ಹಾಗೂ ಚೈತನ್ಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಮಲ್ಲಮ್ಮನ ಆಶಯಗಳನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಅಧ್ಯಯನ ಪೀಠ ಆರಂಭಿಸುವಂತೆ ರಡ್ಡಿ ಸಮುದಾಯದ ಬೇಡಿಕೆ ಇತ್ತು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪೀಠ ಕಾರ್ಯಾರಂಭ ಮಾಡಲಿದೆ. ರಡ್ಡಿ ಸಮುದಾಯ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಮುಂದಾದಲ್ಲಿ ಸರ್ಕಾರದಿಂದ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
 
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವೈಯಕ್ತಿಕ ಸುಖಲಾಲಸೆಗೆ ಬಲಿಯಾಗದೇ ಸಮುದಾಯದ ಒಳಿತಿಗೆ ಬದುಕಬೇಕು ಎಂದು ಹೇಳಿಕೊಟ್ಟ ಮಲ್ಲಮ್ಮನ ವಿಚಾರಗಳು ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಜನಮಾನಸಕ್ಕೆ ತಲುಪಿಲ್ಲ. ಆಕೆಯ ಆಶಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸ್ಮಾರಕ ನಿರ್ಮಾಣ ಸೇರಿದಂತೆ ಯಾವುದೇ ಕೆಲಸಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಕೊಡಿಸುವುದಾಗಿ ಆಶ್ವಾಸನೆ ನೀಡಿದರು.
 
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ‘ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿದ್ದು, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಅವಿಭಕ್ತ ಕುಟುಂಬದ ಮೌಲ್ಯಗಳನ್ನು ಎತ್ತಿ ಹಿಡಿದ ಮಲ್ಲಮ್ಮನ ಆಶಯಗಳೇ ಇಂದಿನ ಸಂದಿಗ್ಧತೆಗೆ ಉತ್ತರವಾಗಿದೆ’ ಎಂದರು.
 
ಶ್ರೀಶೈಲಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎರೆಹೊಸಹಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಇಳಕಲ್‌ನ ವಿಜಯಮಹಾಂತೇಶ ಮಠದ ಡಾ.ಮಹಾಂತ ಸ್ವಾಮೀಜಿ ಪಾಲ್ಗೊಂಡಿದ್ದರು. ಸಚಿವರಾದ ಎಚ್.ಕೆ.ಪಾಟೀಲ, ಎಚ್.ವೈ.ಮೇಟಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ, ಶಾಸಕರಾದ ಹಂಪನಗೌಡ ಬಾದರ್ಲಿ, ಜೆ.ಟಿ.ಪಾಟೀಲ, ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್, ಸಂಸದ ಪಿ.ಸಿ.ಗದ್ದಿಗೌಡರ, ಎಸ್.ಆರ್.ಪಾಟೀಲ, ಶರಣಪ್ಪ ಮಟ್ಟೂರ, ಹೇಮರಡ್ಡಿ ಮಲ್ಲಮ್ಮ ರಡ್ಡಿ ಸಮಾಜದ ಅಧ್ಯಕ್ಷ ಡಾ.ಶೇಖರಗೌಡ ಮಾಲಿ ಪಾಟೀಲ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.