ADVERTISEMENT

ಗುಳೆ ಬಂದ ಕಾರ್ಮಿಕರ ಅಲೆದಾಟ!

ಕೊಡಗು ಜಿಲ್ಲೆಯಲ್ಲೂ ಬರ ಸ್ಥಿತಿ; ಕಾಫಿತೋಟಗಳಲ್ಲಿ ಸಿಗದ ಕೂಲಿ

ಅದಿತ್ಯ ಕೆ.ಎ.
Published 1 ಮೇ 2016, 19:44 IST
Last Updated 1 ಮೇ 2016, 19:44 IST
ಮಡಿಕೇರಿ ನಗರದ ಖಾಲಿ ಪ್ರದೇಶದಲ್ಲಿ ಠಿಕಾಣಿ ಹೂಡಿರುವ ಕಾರ್ಮಿಕರು
ಮಡಿಕೇರಿ ನಗರದ ಖಾಲಿ ಪ್ರದೇಶದಲ್ಲಿ ಠಿಕಾಣಿ ಹೂಡಿರುವ ಕಾರ್ಮಿಕರು   

ಮಡಿಕೇರಿ: ಬರ ಸ್ಥಿತಿಯಿಂದಾಗಿ ಕೆಲಸ ಅರಸಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಿಂದ ಕೊಡಗು ಜಿಲ್ಲೆಗೆ ಬಂದಿರುವ ಕಾರ್ಮಿಕರಿಗೆ ಇಲ್ಲಿಯೂ ಸಂಕಷ್ಟ ತಪ್ಪಿಲ್ಲ!

ಜಿಲ್ಲೆಯಲ್ಲೂ ಈ ಬಾರಿ ಬರ ಪರಿಸ್ಥಿತಿಯಿದ್ದು, ಕಾಫಿತೋಟಗಳಲ್ಲಿ ಕೆಲಸ ಇಲ್ಲವಾಗಿದೆ. ನೀರಿಲ್ಲದೆ ಕಾಫಿಗಿಡ ಹಾಗೂ ಕಾಳುಮೆಣಸಿನ ಬಳ್ಳಿಗಳು ಒಣಗಿ ನಿಂತಿರುವ ಕಾರಣ ತೋಟದ ಮಾಲೀಕರು ಸಹ  ಕಾರ್ಮಿಕರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ತೋಟದ ಕೆಲಸ ಹಾಗೂ   ಕಟ್ಟಡ ನಿರ್ಮಾಣ ಕೆಲಸ ಅರಸಿ  ನೂರಾರು ಸಂಖ್ಯೆಯಲ್ಲಿ ಕೂಲಿಯಾಳುಗಳು ನಿತ್ಯ ನಗರಕ್ಕೆ ಬಂದಿಳಿಯುತ್ತಿದ್ದಾರೆ. ಇವರ್‍ಯಾರಿಗೂ ಈ ಬಾರಿ ಕಿಮ್ಮತ್ತಿಲ್ಲ. ಪ್ರತಿವರ್ಷ ಬಸ್‌ನಲ್ಲಿ ಬಂದಿಳಿದ ತಕ್ಷಣ ಮಾಲೀಕರು, ಮೇಸ್ತ್ರಿಗಳು ಕಾರ್ಮಿಕರನ್ನು ಕರೆದೊಯ್ಯಲು ಪೈಪೋಟಿಗೆ ಬೀಳುತ್ತಿದ್ದರು. ಆದರೆ, ಈ ಬಾರಿ ಆ ಸ್ಥಿತಿಯಿಲ್ಲ. ಗುಳೆ ಬಂದಿರುವ ಕಾರ್ಮಿಕರೆಲ್ಲರೂ ಕೆಲವು ದಿನಗಳಿಂದ ನಗರದ ಖಾಲಿ ನಿವೇಶನಗಳಲ್ಲಿ ಠಿಕಾಣಿ ಹೂಡಿದ್ದಾರೆ. ಕೆಲಸ ಕೊಟ್ಟರೆ ಸಾಕೆಂಬ ಸ್ಥಿತಿಗೆ ತಲುಪಿದ್ದಾರೆ.

ರಾಜ್ಯದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಕಲಬುರ್ಗಿ ಜಿಲ್ಲೆಗಳ ಕಾರ್ಮಿಕರಿಗೆ ಮಾತ್ರ ಈ ಬಿಸಿ ತಟ್ಟಿಲ್ಲ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯದ ಕಾರ್ಮಿಕರೂ ತೊಂದರೆಗೆ ಸಿಲುಕಿದ್ದಾರೆ. ಎಲ್ಲರೂ ವಾಪಸ್‌ ತೆರಳಲು ಹಣ ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ನಾಲ್ಕೈದು ತಿಂಗಳುಗಳಿಂದ ಹಿಡಿದು, ನಿನ್ನೆ–ಮೊನ್ನೆ ಬಂದವರೂ ನಗರದಲ್ಲಿಯೇ ನೆಲೆಸಿದ್ದಾರೆ. ಕೂಲಿ ಸಿಗುವ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಈ ವೇಳೆಗಾಗಲೇ ಕೊಡಗು ಜಿಲ್ಲೆಯಲ್ಲಿ ಹದ ಮಳೆ ಬಿದ್ದು ಕಾಫಿತೋಟಗಳಲ್ಲಿ ಹಸಿರು ಕಾಣಿಸುತ್ತಿತ್ತು. ಕಾರ್ಮಿಕರು ಒಂದಷ್ಟು ಹಣ ಗಳಿಸಿ ಕೊಡಗಿನಲ್ಲಿ ಜಡಿ ಮಳೆ ಪ್ರಾರಂಭವಾಗುವ ವೇಳೆಗೆ ಊರಿನತ್ತ ಹೆಜ್ಜೆ ಹಾಕುತ್ತಿದ್ದರು.

ಆದರೆ, ಅವರೆಲ್ಲರೂ ಇದೀಗ ಬರಿಗೈನಲ್ಲಿ ಹಿಂದಿರುಗುವಂತಾಗಿದೆ. ಗಾರೆ ಕೆಲಸಗಾರರು ಮತ್ತು ಮಣ್ಣು ಕೆಲಸಗಾರರಿಗೆ ಒಂದಿಷ್ಟು ಕೆಲಸ ಲಭಿಸುತ್ತಿರುವುದನ್ನು ಬಿಟ್ಟರೆ, ಕಾಫಿತೋಟವನ್ನೇ ನಂಬಿದವರು ಅತಂತ್ರರಾಗಿದ್ದಾರೆ.

‘ಕಳೆದ ವರ್ಷ ನಿತ್ಯ ₹ 500ರಿಂದ ₹ 600 ದುಡಿಮೆ ಮಾಡುತ್ತಿದ್ದೆವು. ಆದರೆ, ಈ ವರ್ಷ ಕೆಲಸವೇ ಸಿಗುತ್ತಿಲ್ಲ. ನಮ್ಮ ಊರಿನಲ್ಲಿ  ಕುಡಿಯಲೂ ನೀರಿಲ್ಲ. ಮಳೆಯಿಲ್ಲದ ಕಾರಣ ಶುಂಠಿ ಬೆಳೆ ಒಣಗುತ್ತಿದ್ದು, ಅಲ್ಲಿಯೂ ಕೆಲಸ ಸಿಗುತ್ತಿಲ್ಲ. ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಕೂಲಿ ಕೆಲಸ ಸಿಗುವ ಎಂಬ ವಿಶ್ವಾಸದಿಂದ ಬಂದಿದ್ದೇವೆ’ ಎನ್ನುತ್ತಾರೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಹಾಸನ ಜಿಲ್ಲೆ ಹಳೇಬೀಡು ಬಳಿಯ ಬೆಂಡಿಕೊಪ್ಪಲು ಗ್ರಾಮದಿಂದ ಬಂದಿರುವ ಮುನಿಯಪ್ಪ.

‘ಜಮೀನಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅಧಿಕಾರಿಗಳ ಭಯದಿಂದ ಜಮೀನು ಪಾಳು ಬಿಟ್ಟಿದ್ದೇವೆ. ಪ್ರತಿ ವರ್ಷ ಕೊಡಗು ಜಿಲ್ಲೆಗೆ ಬಂದಾಗ ಆರು ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣ ಸಂಪಾದನೆಯಾಗುತ್ತಿತ್ತು. ಈ ಬಾರಿ ಬಸ್‌ ಖರ್ಚಿಗೆ ಸಾಲ ಮಾಡಿಕೊಂಡು ಹೋಗುವ ಸ್ಥಿತಿಯಿದೆ. ಮರಳು ಅಭಾವ, ಬರದ ಹಿನ್ನೆಲೆಯಲ್ಲಿ ಕೆಲವರು ಮನೆ ಕಟ್ಟುವ ನಿರ್ಧಾರವನ್ನು ಮುಂದಕ್ಕೆ ಹಾಕಿದ್ದಾರೆ. ಇದರಿಂದ ಮಣ್ಣಿನ ಕೆಲಸ ಸಹ ಕಡಿಮೆಯಾಗಿದೆ’ ಎಂದು ನೋವು ತೋಡಿಕೊಳ್ಳುತ್ತಾರೆ 10 ವರ್ಷದಿಂದ ಕೂಲಿ ಅರಸಿ ಮಲೆನಾಡಿಗೆ ಬರುತ್ತಿರುವ ಶಿವಮೊಗ್ಗ ಜಿಲ್ಲೆ ಗಾಜನೂರು ಸಮೀಪದ ಲಕ್ಷ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.