ADVERTISEMENT

ಗೌರಿ ಹಂತಕರ ಬೈಕ್ ಸಂಖ್ಯೆ ಕೆಎ–02

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಗೌರಿ ಹಂತಕರ ಬೈಕ್ ಸಂಖ್ಯೆ ಕೆಎ–02
ಗೌರಿ ಹಂತಕರ ಬೈಕ್ ಸಂಖ್ಯೆ ಕೆಎ–02   

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಬಳಿಕ ಹಂತಕರು ‘ಕೆಎ–02’ ನೋಂದಣಿ ಸಂಖ್ಯೆಯಿಂದ ಪ್ರಾರಂಭವಾಗುವ ಕೆಂಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂಬ ಖಚಿತ ಸುಳಿವು ಆಧರಿಸಿ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.‌

‘ಇಬ್ಬರು ಹಂತಕರು ಪಲ್ಸರ್ ಬೈಕ್‌ನಲ್ಲಿ ಪರಾರಿಯಾಗುವ ದೃಶ್ಯವು ಮನೆ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಅದರ ನೋಂದಣಿ ಸಂಖ್ಯೆ ಸ್ಪಷ್ಟವಾಗಿಲ್ಲ. ಆದರೆ, ತಾಂತ್ರಿಕ ಪರಿಣಿತರಿಂದ ಆ ದೃಶ್ಯವನ್ನು ಅಭಿವೃದ್ಧಿಪಡಿಸಿದ್ದು, ನೋಂದಣಿ ಸಂಖ್ಯೆಯು ‘ಕೆಎ–02’ಯಿಂದ ಪ್ರಾರಂಭವಾಗುತ್ತದೆ ಎಂಬುದು ಖಚಿತವಾಯಿತು. ಉಳಿದ ನಾಲ್ಕು ಸಂಖ್ಯೆಗಳು ಅಸ್ಪಷ್ಟವಾಗಿವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2.80 ಲಕ್ಷ ಬೈಕ್: ‘ಸಾರಿಗೆ ಇಲಾಖೆ ಅಧಿಕಾರಿಗಳ ನೆರವಿನಿಂದ ಬೈಕ್ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ. ರಾಜ್ಯದಲ್ಲಿ ಸುಮಾರು 2.80 ಲಕ್ಷ ಕೆಂಪು ಬಣ್ಣದ ಪಲ್ಸರ್‌ ಬೈಕ್‌ಗಳಿವೆ. ಅವುಗಳಲ್ಲಿ ಕೆಎ–02 ನೋಂದಣಿ ಸಂಖ್ಯೆಯಿಂದ ಪ್ರಾರಂಭವಾಗುವ ಬೈಕ್‌ಗಳ ಸಂಖ್ಯೆ 1.4 ಲಕ್ಷಕ್ಕೂ ಹೆಚ್ಚು’ ಎಂದು ಮಾಹಿತಿ ನೀಡಿದರು.

ADVERTISEMENT

‘ಇಷ್ಟೊಂದು ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆಗೈದಿರುವ ಹಂತಕರು, ಕೃತ್ಯಕ್ಕೆ ಸ್ವಂತ ಬೈಕ್ ಬಳಸಿರುವ ಸಾಧ್ಯತೆ ತೀರಾ ಕಡಿಮೆ. ನಕಲಿ ನೋಂದಣಿ ಫಲಕ ಅಳವಡಿಸಿದ ಅಥವಾ ಕದ್ದ ಬೈಕನ್ನು ಕೃತ್ಯಕ್ಕೆ ಬಳಕೆ ಮಾಡಿಕೊಂಡಿರಬಹುದು. ಹತ್ಯೆ ನಡೆದು 15 ದಿನ ಕಳೆದಿದ್ದು, ಅವರು ಇನ್ನೂ ಆ ಬೈಕ್ ಇಟ್ಟುಕೊಂಡಿರುತ್ತಾರೆ ಎಂದೂ ಹೇಳಲಾಗದು’ ಎಂದು ಹೇಳಿದರು.

800 ಡಿವಿಆರ್: ‘ಗೌರಿ ಅವರ ಮನೆ, ಎದುರುಗಡೆಯ ಅಪಾರ್ಟ್‌ಮೆಂಟ್ ಸಮುಚ್ಚಯ, ನಗರದ ಎಲ್ಲ ಟೋಲ್‌ ಗೇಟ್‌ಗಳು, ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳು, ಬಸ್ ಹಾಗೂ ರೈಲು ನಿಲ್ದಾಣಗಳು, ಬಸವನಗುಡಿಯ ‘ಗೌರಿ ಲಂಕೇಶ್ ಪತ್ರಿಕೆ’ ಕಚೇರಿಯಿಂದ ಐಡಿಯಲ್‌ ಹೋಮ್ಸ್‌ ಟೌನ್‌ಶಿಪ್‌ನಲ್ಲಿರುವ ಅವರ ಮನೆವರೆಗಿನ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದೇವೆ. ಸದ್ಯ 800 ಡಿವಿಆರ್ ಪೆಟ್ಟಿಗೆಗಳು ನಮ್ಮ ವಶದಲ್ಲಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹೆಚ್ಚಿನ ತನಿಖೆಗಾಗಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರಕ್ಕೆ ತೆರಳಿದ್ದ ವಿಶೇಷ ತಂಡಗಳು, ಭಾನುವಾರ ಬರಿಗೈಲಿ ರಾಜ್ಯಕ್ಕೆ ಮರಳಿವೆ. ಹೊರ ರಾಜ್ಯಗಳಿಗೆ ತೆರಳಿದ್ದ ತಂಡದ ಸದಸ್ಯರ ಜತೆ ಮಂಗಳವಾರ ಸಿಐಡಿ ಕಚೇರಿಯಲ್ಲಿ ಸಭೆ ನಡೆಸಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ತನಿಖಾ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಆದರೆ, ಹಂತಕರ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.