ADVERTISEMENT

ಚಲನಚಿತ್ರ ನಿರ್ಮಾಪಕರ ಸಂಘದಲ್ಲಿ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 12:13 IST
Last Updated 23 ಜುಲೈ 2016, 12:13 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಅಧ್ಯಕ್ಷ ಮುನಿರತ್ನ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಶೀಘ್ರವೇ ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಅಧ್ಯಕ್ಷರ ಅವಧಿ ಮುಗಿದು ಒಂದೂವರೆ ವರ್ಷಗಳಾದರೂ ಸಂಘಕ್ಕೆ ಚುನಾವಣೆ ನಡೆದಿಲ್ಲ. ಕಳೆದ ಐದೂವರೆ ವರ್ಷಗಳಿಂದ ಮುನಿರತ್ನ ಸಂಘದ ಅಧ್ಯಕ್ಷರಾಗಿದ್ದಾರೆ. ಆಗಸ್ಟ್ 31ರ ಒಳಗೆ ಚುನಾವಣೆ ನಡೆಸಬೇಕು ಎಂದು ಸಂಘದ ಜಂಟಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ. ಈ ಗಡುವಿನೊಳಗೆ ಚುನಾವಣೆ ನಡೆಯದಿದ್ದಲ್ಲಿ ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಸಂಘದ ಎಂಟು ಪದಾಧಿಕಾರಿಗಳು ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದಾರೆ.

‘ಸಂಘದ ಬೈಲಾ ಸಮರ್ಪಕವಾಗಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಚುನಾವಣೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಅಂತಹ ಯಾವ ತಡೆಯಾಜ್ಞೆಯೂ ಇಲ್ಲ. ಅಧ್ಯಕ್ಷರೇ ಬೈಲಾ ಕಮಿಟಿ ಸಭೆ ಕರೆದು ತಿದ್ದುಪಡಿ ಮಾಡಿ ಚುನಾವಣೆ ಘೋಷಣೆ ಮಾಡಬಹುದು’ ಎಂದು ಸಂಘದ ಸದಸ್ಯ ಬಾ.ಮ. ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಮುನಿರತ್ನ ಅವರು, ‘ಈ ಹಿಂದೆಯೇ ಕಮಿಟಿ ರಚಿಸಿ ಚುನಾವಣೆ ಬೈಲಾ ಸಿದ್ಧಪಡಿಸಲಾಗಿತ್ತು. ಆದರೆ ಬೈಲಾದಲ್ಲಿನ ಅಂಶಗಳು ಸೂಕ್ತವಾಗಿಲ್ಲ ಎಂದು ಕೆಲವರು ನ್ಯಾಯಾಲಯಕ್ಕೆ ಮೊರೆ ಹೋದರು. ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಜಿದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೈಲಾ ರೂಪಿಸಿ ಚುನಾವಣೆ ನಡೆಸಬೇಕು ಎಂದು ಆದೇಶಿಸಿತು. ಅದಾದ ನಂತರ ಮೂರು ಬಾರಿ ಸಭೆ ಕರೆದಾಗಲೂ ಒಮ್ಮತಕ್ಕೆ ಬರಲಾಗಿಲ್ಲ. ನಾನು ಈ ಕ್ಷಣಕ್ಕೇ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ’ ಎಂದರು. ಆಗಸ್ಟ್ 3ರಂದು ಮತ್ತೊಮ್ಮೆ ಸಭೆ ಸೇರಿ ಚರ್ಚಿಸುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT