ADVERTISEMENT

ಚಿತ್ರಕಲೆ ವಿದ್ಯಾರ್ಥಿಗಳು ಅತಂತ್ರ

ಎಸ್‌ಎಸ್‌ಎಲ್‌ಸಿ ಆದವರಿಗೆ ಪ್ರವೇಶ

ಕೋಡಿಬೆಟ್ಟು ರಾಜಲಕ್ಷ್ಮಿ
Published 27 ಆಗಸ್ಟ್ 2017, 20:23 IST
Last Updated 27 ಆಗಸ್ಟ್ 2017, 20:23 IST
ಚಿತ್ರಕಲೆ ವಿದ್ಯಾರ್ಥಿಗಳು ಅತಂತ್ರ
ಚಿತ್ರಕಲೆ ವಿದ್ಯಾರ್ಥಿಗಳು ಅತಂತ್ರ   

ಮಂಗಳೂರು: ರಾಜ್ಯದ ಕೆಲವು ವಿಶ್ವವಿದ್ಯಾಲಯದ ಚಿತ್ರಕಲಾ ಕಾಲೇಜುಗಳು ಹಾಗೂ ಚಿತ್ರಕಲಾ ಮಹಾವಿದ್ಯಾಲಯಗಳು ಯುಜಿಸಿ ನಿಯಮಾವಳಿಯಂತೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳದ ಕಾರಣ ಹೊರರಾಜ್ಯಗಳಲ್ಲಿ ಉನ್ನತ ವ್ಯಾಸಂಗ ಬಯಸುವ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ಈ ಹಿಂದೆ ಎಸ್ಎಸ್‌ಎಲ್‌ಸಿ ಪ್ರಮಾಣ ಪತ್ರ ಆಧರಿಸಿಯೇ 5 ವರ್ಷದ ಫೈನ್ ಆರ್ಟ್ ಕೋರ್ಸ್‌ ಅನ್ನು ವಿದ್ಯಾರ್ಥಿಗಳು ಪಡೆಯಬಹುದಿತ್ತು. ಆದರೆ ಯುಜಿಸಿ ವಿಶುವಲ್‌ ಆರ್ಟ್ ಮಾಡೆಲ್ ಕರಿಕ್ಯೂಲಮ್-2001 ರ ಅನುಸಾರ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಫೈನ್ ಆರ್ಟ್ ಕೋರ್ಸ್‌ ಅನ್ನು ವಿದ್ಯಾರ್ಥಿಗಳಿಗೆ ಪಿಯುಸಿ ಬಳಿಕವೇ ಪಡೆಯುವ ನಿಯಮಾವಳಿಯನ್ನು ಹೊರಡಿಸಲಾಗಿದೆ.

ಆ ಬಳಿಕ ದೇಶದ ವಿವಿಧೆಡೆ ಹೆಚ್ಚಿನ ವಿಶ್ವವಿದ್ಯಾಲಯಗಳು ಫೈನ್ ಆರ್ಟ್ ಕೋರ್ಸ್‌ಗೆ ದ್ವಿತೀಯ ಪಿಯುಸಿ ಶಿಕ್ಷಣವನ್ನು ನಿಗದಿಪಡಿಸಿದವು. ಆದರೆ ಈ ನಿಯಮಾವಳಿಯನ್ನು ರಾಜ್ಯದ ಬಹುತೇಕ ಫೈನ್ ಆರ್ಟ್ ಕೋರ್ಸ್ ನಡೆಸುವ ವಿವಿಗಳು ಅನುಸರಿಸದ ಕಾರಣ ಕರ್ನಾಟಕದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ADVERTISEMENT

ಫೈನ್ ಆರ್ಟ್ ಮುಗಿದ ಬಳಿಕ ಹೊರರಾಜ್ಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಹಲವು ವಿದ್ಯಾರ್ಥಿಗಳು ಕಲಿಕೆ ಮೊಟಕುಗೊಳಿಸಬೇಕಾಗಿದೆ.

‘ದೇಶದ ಉನ್ನತ ಶಿಕ್ಷಣದ ನಿರ್ವಹಣೆಗಾಗಿ ಇರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಇದರ ನಿಯಮಾವಳಿ ಪ್ರಕಾರವೇ ದೇಶದ ಎಲ್ಲ ವಿಶ್ವವಿದ್ಯಾಲಯಗಳು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಯುಜಿಸಿ ಆದೇಶವನ್ನು ನಮ್ಮ ರಾಜ್ಯದ ಕೆಲವು ವಿವಿಗಳು ಪಾಲಿಸದೇ ಇರುವದರಿಂದ ವಿದ್ಯಾರ್ಥಿಗಳಿಗೆ ಹೊರರಾಜ್ಯದಲ್ಲಿ ಸ್ನಾತಕೊತ್ತರ ಪದವಿ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ ’ ಎಂದು ಸಂತ್ರಸ್ತ ವಿದ್ಯಾರ್ಥಿಗಳು ವಿವರಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಯುಜಿಸಿ ನಿಯಮಗಳನ್ನೇ ಅನುಸರಿಸುತ್ತಿದೆ. ವಿವಿಗೆ ಸಂಯೋಜನೆಗೊಂಡ ಆಳ್ವಾಸ್‌ ಕಾಲೇಜಿನಲ್ಲಿ ಚಿತ್ರಕಲೆಯ ಪದವಿ ತರಗತಿಗಳು ನಡೆಯುತ್ತಿದ್ದು, ಪದವಿಯ ಬಳಿಕ ವಿದ್ಯಾರ್ಥಿಗಳು ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿಯೂ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹದು ಎನ್ನುತ್ತಾರೆ ಆಳ್ವಾಸ್‌ ಕಾಲೇಜಿನ ಪ್ರಾಧ್ಯಾಪಕ ಭಾಸ್ಕರ ನೆಲ್ಯಾಡಿ.

ಆದರೆ ಮಂಗಳೂರಿನಲ್ಲೇ ಇರುವ ಮಹಾಲಸಾ ವಿದ್ಯಾಲಯ ಹಂಪಿಯ ಕನ್ನಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ ಆಧರಿಸಿ ವಿದ್ಯಾರ್ಥಿಗಳಿಗೆಈ ಬಾರಿಯೂ ಪ್ರವೇಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್, ಬೆಂಗಳೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಯುಜಿಸಿನಿಯಮಾವಳಿಗಳನ್ನು ಪಾಲಿಸಿಪಿಯುಸಿ ಬಳಿಕವೇ ಫೈನ್ ಆರ್ಟ್ ಕೋರ್ಸ್‌ಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಅನ್ಯಾಯ: ಸಚಿವರಿಗೆ ಪತ್ರ

ಯುಜಿಸಿ ನಿಯಮಾವಳಿ ಇದ್ದರೂ ಇದನ್ನು ಪರಿಗಣಿಸದೆ 2017- 18 ಪ್ರವೇಶಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ , ಕನ್ನಡ ವಿಶ್ವವಿದ್ಯಾಲಯದ ಹಂಪಿಯ ಬಾದಾಮಿ ಕೇಂದ್ರದ ಚಿತ್ರಕಲಾ ವಿಭಾಗ ಮತ್ತೆ ಎಸ್ಎಸ್‌ಎಲ್‌ಸಿ ಮಾನದಂಡದಂತೆ ಅರ್ಜಿ ಆಹ್ವಾನಿಸಿ ತರಗತಿ ನಡೆಸುತ್ತಿದೆ ಎನ್ನುತ್ತಾರೆ ಈ ಕುರಿತು ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿರುವ ಚಂದ್ರಕಾಂತ ಜಟ್ಟಣ್ಣನವರ್‌. ವಿಶ್ವವಿದ್ಯಾಲಯಗಳಿಂದ ಆಗಿರುವ ಪ್ರಮಾದದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಈಗಾಗಲೇ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಿಳಿಸಿರುವುದಾಗಿ ಅವರು ಹೇಳುತ್ತಾರೆ.

ಮುಖ್ಯಾಂಶಗಳು

* ರಾಜ್ಯದಲ್ಲಿ 2 ವಿವಿಗಳಿಂದ ಮಾತ್ರ ನಿಯಮ ಪಾಲನೆ

* ಎಸ್ಎಸ್‌ಎಲ್‌ಸಿ  ಬದಲಿಗೆ ಪಿಯುಸಿಯೇ ಮೂಲ ಮಾನದಂಡ ಆಗಬೇಕು

* ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೂ ಮನವರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.