ADVERTISEMENT

ಚಿನ್ನದ ಹುಡುಗಿಗೆ ಕೆಎಎಸ್ ಕನಸು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ತುಮಕೂರು ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಪದಕ ಪಡೆದ ಎಂ.ಜ್ಯೋತಿ (ನಾಲ್ಕು ಪದಕ), ಬಿ.ಮಾನಸ, ಜಿ.ಅರುಣಾ, ಜಿ.ಎಸ್‌.ಸಮ್ರಿನ್ ನಾಜ್, ಜೆ.ತೇಜಶ್ವರಿ (ತಲಾ ಮೂರು ಪದಕಗಳು) ಸಂಭ್ರಮಿಸಿದ ಕ್ಷಣ
ತುಮಕೂರು ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವದಲ್ಲಿ ಹೆಚ್ಚು ಚಿನ್ನದ ಪದಕ ಪಡೆದ ಎಂ.ಜ್ಯೋತಿ (ನಾಲ್ಕು ಪದಕ), ಬಿ.ಮಾನಸ, ಜಿ.ಅರುಣಾ, ಜಿ.ಎಸ್‌.ಸಮ್ರಿನ್ ನಾಜ್, ಜೆ.ತೇಜಶ್ವರಿ (ತಲಾ ಮೂರು ಪದಕಗಳು) ಸಂಭ್ರಮಿಸಿದ ಕ್ಷಣ   

ತುಮಕೂರು: ‘ಅಪ್ಪ ವಾಚ್ ರಿಪೇರಿ ಕೆಲಸ ಮಾಡ್ತಾರೆ. ಸಂಕಷ್ಟದಲ್ಲೂ ಕಷ್ಟಪಟ್ಟು ಓದಿಸಿದ್ದಾರೆ. ನಾನೂ ಕೆಎಎಸ್ ಮಾಡಬೇಕು ಎಂಬ ಕನಸು ಕಂಡವಳು. ಈಗ 4 ಚಿನ್ನದ ಪದಕ ಲಭಿಸಿದ್ದು, ಭರವಸೆ ಹೆಚ್ಚಿಸಿದೆ’

ತುಮಕೂರು ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವದಲ್ಲಿ 4 ಚಿನ್ನದ ಪದಕ ಗಳಿಸಿದ ಪಿ.ಜ್ಯೋತಿ ಅವರ ನುಡಿಗಳು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಪಿ.ಜ್ಯೋತಿ ಈ ಸಾಧನೆ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಅಂಬೇಡ್ಕರ್ ನಗರದ  ಮಲ್ಲಿಕಾರ್ಜುನ್ ಮತ್ತು ಭಾಗ್ಯಮ್ಮ ಅವರ ಮಗಳು. ಮೂವರು ಹೆಣ್ಣು ಮಕ್ಕಳಲ್ಲಿ ಜ್ಯೋತಿ ಅವರೇ ಹಿರಿಯರು.

‘ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಗಡಿಯ ಕಾಲೇಜು ಉಪನ್ಯಾಸಕರಾದ ನಟರಾಜ್ ಅವರೊಂದಿಗೆ ಮದುವೆಯಾಯಿತು.  ಪದವಿ ಶಿಕ್ಷಣ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕುಣಿಗಲ್ ತಾಲ್ಲೂಕಿನ ನಾಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಯಾವತ್ತೂ ನಾನು ಮುಂದೆ ಇದ್ದೆ. ಈಗ ನಾಲ್ಕು ಚಿನ್ನದ ಪದಕ ಪಡೆದು ಅದೇ ಸಾಧನೆ ಮಾಡಿದ್ದೇನೆ’ ಎಂದರು.

ಪ್ರತಿ ನಿತ್ಯ ನಾಲ್ಕು ತಾಸು ವ್ಯಾಸಂಗ ಮಾಡಿದ್ದು, ನಾವೇ ಓದಿ, ನಾವೇ ನೋಟ್ಸ್ ಮಾಡಿಕೊಂಡಿದ್ದು ಹೆಚ್ಚು ಅಂಕ ಗಳಿಸಲು ಸಹಕಾರಿಯಾಯಿತು ಎಂದು ತಮ್ಮ ಅಭ್ಯಾಸದ ಕ್ರಮದ ಬಗ್ಗೆ ತಿಳಿಸಿದರು.

ಮನೆಪಾಠ ಹೇಳುತ್ತಿದ್ದ ವಿದ್ಯಾರ್ಥಿನಿಗೆ  3 ಚಿನ್ನದ ಪದಕ: ತನ್ನ ಅಕ್ಕನ ಜೊತೆ ಬೆಳಿಗ್ಗೆ ಮತ್ತು ಸಂಜೆ 1ರಿಂದ 10ನೇ ತರಗತಿ ಮಕ್ಕಳಿಗೆ ಮನೆ ಪಾಠ ಹೇಳಿಕೊಡುವ ವಿದ್ಯಾರ್ಥಿನಿ ಬಿ.ಮಾನಸ  ಅವರು ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ನಗರದ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪೂರ್ಣಗೊಳಿಸಿ ಈಗ ಎಂಕಾಂ ವ್ಯಾಸಂಗ ಮಾಡುತ್ತಿದ್ದಾರೆ.  ಮನೆಯ ಆರ್ಥಿಕ ಕಷ್ಟಗಳ ನಡುವೆಯೂ ಆಕೆಯ ಸಾಧನೆ ದೊಡ್ಡದು. ಬಿ.ಮಾನಸ. ಪದವಿಯಲ್ಲಿನ ಅವರ ಸಾಧನೆಗೆ ಮೂರು ಚಿನ್ನದ ಪದಕಗಳು ಮುಡಿಗೇರಿವೆ. ಮಾನಸ ತಂದೆ ಬಸವರಾಜ್ ಪ್ರಿಂಟಿಂಗ್  ಪ್ರೆಸ್ ನಡೆಸುತ್ತಿದ್ದರು. ಈಚೆಗೆ ಮೃತಪಟ್ಟಿದ್ದಾರೆ.

ತಾಯಿ ರಾಜೇಶ್ವರಿ ಜೀವನ ನಿರ್ವಹಣೆಗಾಗಿ ಹೊಲಿಗೆ ಕೆಲಸ ಮಾಡುವರು. ಅಕ್ಕ ಮೇಘನಾ ಮನೆ ಪಾಠ ಹೇಳುವರು. ಮನೆಯ ಕಷ್ಟಗಳಿಗೆ ಹೆಗಲು ಕೊಡುವ ಉದ್ದೇಶದಿಂದ ವ್ಯಾಸಂಗ ಮಾಡುತ್ತಲೇ ಮಾನಸ ಶಿಕ್ಷಣ ಮುಂದುವರಿಸಿದ್ದಾರೆ.

‘ನಾನು ಚಿನ್ನದ ಪದಕ ನಿರೀಕ್ಷಿಸಿದ್ದೆ.  ನನ್ನ ಪರಿಶ್ರಮವೇ ಈ ನಿರೀಕ್ಷೆಗೆ ಕಾರಣ. ಲೆಕ್ಕ ಪರಿಶೋಧಕಿ ಅಥವಾ ಅಧ್ಯಾಪಕಿ ಆಗಬೇಕು ಎಂಬ ಆಶಯವಿದೆ ಎಂದರು.  ಅಧ್ಯಾಪಕರಾದ ಮಲ್ಲೇಶಪ್ಪ, ಹನುಮಂತರಾಯಪ್ಪ ಅವರ ಮಾರ್ಗದರ್ಶನ ಸ್ಮರಿಸಿದರು.

ರ್‍ಯಾಂಕ್ ಪಡೆದ ಕೂಲಿಕಾರನ ಮಗ
ಕಿರಾಣಿ ಅಂಗಡಿಯಲ್ಲೇ ಕೆಲಸ ಮಾಡಿ ಪದವಿ ಪೂರೈಸಿ ಸ್ನಾತಕೋತ್ತರ ಶಿಕ್ಷಣ ಪಡೆಯುವಾಗ ಅಧ್ಯಾಪಕರೊಬ್ಬರ ನೆರವಿನ ಹಸ್ತದಿಂದ ವಿದ್ಯಾರ್ಥಿಯೊಬ್ಬ ಸ್ನಾತಕೋತ್ತರ ಕನ್ನಡ ವಿಷಯದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡುವ ನಗದು ಪುರಸ್ಕಾರಕ್ಕೆ  ಭಾಜನರಾಗಿದ್ದಾರೆ.

ಶಿರಾ ತಾಲ್ಲೂಕಿನ ವಡ್ಡನಹಳ್ಳಿ ತಾಂಡಾದ  ವಸಂತ ನಾಯ್ಕ್ ಈ ನಗದು ಪುರಸ್ಕಾರಕ್ಕೆ ಭಾಜನರಾದವರು. ‘ಅಪ್ಪ ಚಂದ್ರ ನಾಯ್ಕ್ ಕೂಲಿ ಕೆಲಸ ಮಾಡುತ್ತಾರೆ. ನಾನು ಶಿಕ್ಷಣ ಪಡೆಯಲೇಬೇಕು ಎಂಬ ಹಠದಿಂದ ಓದಿಕೊಂಡು ಬಂದೆ. ಪದವಿಯಲ್ಲಿದ್ದಾಗ ಶಿರಾದ ಪ್ರಕಾಶ್ ಎಂಬುವರ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. 

ಸ್ನಾತಕೋತ್ತರ ಶಿಕ್ಷಣ ಪಡೆಯಲು ವಿಶ್ವವಿದ್ಯಾಲಯಕ್ಕೆ ಬಂದಾಗ ವಸತಿ ನಿಲಯದಲ್ಲಿದ್ದರೂ ಖರ್ಚು ವೆಚ್ಚಕ್ಕೆ ಕಷ್ಟವಾಗುತ್ತಿತ್ತು.  ಪ್ರಾಧ್ಯಾಪಕರಾದ ಡಾ.ನಿತ್ಯಾನಂದಶೆಟ್ಟಿ ಅವರು ಪ್ರತಿ ತಿಂಗಳು ₹ 2 ಸಾವಿರ ಕೊಟ್ಟು ನೆರವಾದರು. ಅದೇ ರೀತಿ ಕಳ್ಳಂಬೆಳ್ಳ ಬಸವನಹಳ್ಳಿ ಪ್ರಕಾಶಗೌಡ್ರ ಸಹಾಯವೂ ದೊಡ್ಡದು ಎಂದು ಸ್ಮರಿಸಿದರು. ಕೆಎಎಸ್ ಮಾಡುವ ಕನಸು ಕಟ್ಟಿಕೊಂಡಿದ್ದು, ಎಷ್ಟೇ ಕಷ್ಟವಾದರೂ ಆ ಸಾಧನೆ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.