ADVERTISEMENT

ಜನಾರ್ದನರೆಡ್ಡಿ ಸರ್ಕಾರ, ಕಾನೂನಿಗೆ ವಂಚಿಸಿ ಮದುವೆ ಮಾಡಲ್ಲ: ಸಂಸದ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 11:14 IST
Last Updated 25 ಅಕ್ಟೋಬರ್ 2016, 11:14 IST
ಎಲ್.ಇ.ಡಿ ಪರದೆ ಹೊಂದಿರುವ ಮದುವೆ ಆಮಂತ್ರಣ ಪತ್ರಿಕೆ
ಎಲ್.ಇ.ಡಿ ಪರದೆ ಹೊಂದಿರುವ ಮದುವೆ ಆಮಂತ್ರಣ ಪತ್ರಿಕೆ   

ಚಿತ್ರದುರ್ಗ: ಮಾಜಿ ಸಚಿವ ಜನಾರ್ದನರೆಡ್ಡಿ ಸರ್ಕಾರಕ್ಕಾಗಲಿ, ಕಾನೂನಿಗಾಗಲಿ ವಂಚಿಸಿ ತಮ್ಮ ಮಗಳ ಮದುವೆ ಮಾಡುವುದಿಲ್ಲ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿರುವ ಸಂದರ್ಭದಲ್ಲೂ ಕೂಡ ಜನಾರ್ದನರೆಡ್ಡಿ ತಮ್ಮ ಮಗಳ ಮದುವೆ ಅದ್ದೂರಿಯಾಗಿ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಯಾರ ಕಣ್ಣು ತಪ್ಪಿಸಿ ಈ ಮದುವೆ ಮಾಡುತ್ತಿಲ್ಲ. ಪ್ರತಿಯೊಬ್ಬ ಪೋಷಕರು ಅವರವರ ಶಕ್ತ್ಯಾನುಸಾರ ತಮ್ಮ ಮಕ್ಕಳ ಮದುವೆ ಮಾಡುತ್ತಾರೆ. ತೆರಿಗೆ ವಿಚಾರದಲ್ಲೂ ಕೂಡ ವಂಚಿಸದೆ, ಮದುವೆ ಮಾಡಲಿದ್ದಾರೆ. ತೆರಿಗೆ ಅಧಿಕಾರಿಗಳು ಎಲ್ಲವನ್ನೂ ವೀಕ್ಷಿಸಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಸರ್ಕಾರದಿಂದ ಲೂಟಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಲೂಟಿಯಲ್ಲಿ ತೊಡಗಿದ್ದು, 15 ವರ್ಷಕ್ಕೆ ಅಂದರೆ, ಮುಂದಿನ ಮೂರು ಚುನಾವಣೆಗೆ ಬೇಕಾಗುವಂತ ಸಂಪತ್ತನ್ನು ಅಧಿಕಾರಕ್ಕೆ ಬಂದಾಗಿನಿಂದಲೂ ಕ್ರೋಢಿಕರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ವಿಧಾನಸೌಧ ಆವರಣದೊಳಗೆ ಸಿಕ್ಕಂತ ₹ 1.97 ಕೋಟಿ ನಗದು ಸೇರಿದಂತೆ ಅಲ್ಲಿ ಯಾವುದೇ ಭ್ರಷ್ಟಾಚಾರ ನಡೆದರೂ, ಎಷ್ಟೇ ಹಣ ಸಿಕ್ಕರೂ ಕಾಂಗ್ರೆಸ್‌ನವರು ಹೊಣೆಗಾರರು. ಅವರೇ ಈ ವಿಚಾರವಾಗಿ ಉತ್ತರ ನೀಡಬೇಕು ಎಂದ ಅವರು, ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಂದ ಮಾತ್ರ ಇದಕ್ಕೆ ಸರಿ ಉತ್ತರ ಸಿಗುತ್ತದೆ ಎಂಬ ಹೇಳಿಕೆಗೆ ಈ ಮೇಲ್ಕಂಡಂತೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ ಅವರು ಯಡಿಯೂರಪ್ಪ ಅವರಿಗೆ ಈಗ ಬೇಡರ (ನಾಯಕ) ಸಮುದಾಯ ನೆನಪಾಯ್ತು ಎಂಬುದಾಗಿ ಹೇಳಿದ್ದಾರೆ. ವಾಲ್ಮೀಕಿ ಜಯಂತಿ ಜಾರಿ ಸೇರಿದಂತೆ ಪರಿಶಿಷ್ಟ ವರ್ಗದ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರ ಶ್ರಮಿಸಿದೆ. ಪ್ರಸ್ತುತ ರಾಜ್ಯ ಸರ್ಕಾರಕ್ಕೆ ನಾಯಕ ಸಮುದಾಯದ ಮೇಲೆ ಅಭಿಮಾನವಿದ್ದರೆ, ಉಗ್ರಪ್ಪ ಅವರ ಮಾತನ್ನು ಸಿದ್ದರಾಮಯ್ಯ ಕೇಳುವುದಾದರೆ, ಈ ಸರ್ಕಾರವೇ ಶೇ 7.5 ಮೀಸಲಾತಿ ಕಲ್ಪಿಸಲಿ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರ 176 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಎಂಬುದಾಗಿ ಘೋಷಿಸಬೇಕು. ಅದನ್ನು ಬಿಟ್ಟು 110 ತಾಲ್ಲೂಕುಗಳನ್ನು ಘೋಷಿಸಿರುವ ಕ್ರಮ ಸರಿಯಲ್ಲ. ಈರುಳ್ಳಿ, ಮೆಕ್ಕೆಜೋಳ ಬೆಳೆಗಳಿಗೆ ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.