ADVERTISEMENT

ಜಲಚರಗಳ ಸಾವು: ಗ್ರಾಮಸ್ಥರ ಆತಂಕ

ಮುಧೋಳ ಬಳಿ ಘಟಪ್ರಭಾ ಒಡಲಿಗೆ ಸಕ್ಕರೆ ಕಾರ್ಖಾನೆ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:30 IST
Last Updated 2 ಮೇ 2015, 19:30 IST
ಮುಧೋಳ ತಾಲ್ಲೂಕು ಜಾಲಿಬೇರ ಗ್ರಾಮದ ಹತ್ತಿರ ಸಂಪೂರ್ಣ ಕಲುಷಿತಗೊಂಡಿರುವ ಘಟಪ್ರಭೆ ನದಿ ನೀರು
ಮುಧೋಳ ತಾಲ್ಲೂಕು ಜಾಲಿಬೇರ ಗ್ರಾಮದ ಹತ್ತಿರ ಸಂಪೂರ್ಣ ಕಲುಷಿತಗೊಂಡಿರುವ ಘಟಪ್ರಭೆ ನದಿ ನೀರು   

ಮುಧೋಳ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಜೀವ ನದಿ ಘಟಪ್ರಭೆಗೆ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ರಾಸಾಯನಿಕ ಮಿಶ್ರಿತ ತ್ಯಾಜ್ಯ ಬಿಟ್ಟ ಪರಿಣಾಮ ಅಪಾರ ಪ್ರಮಾಣದ ಜಲಚರಗಳು ಸಾವನಪ್ಪಿದ್ದು, ನದಿ ತಟದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಜಾಲಿಬೇರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ತ್ಯಾಜ್ಯ ಬಿಟ್ಟಿರುವುದರಿಂದ ನೀರು ಕಲುಷಿತಗೊಂಡು ಚರಂಡಿ ನೀರಿನಂತೆ ದುರ್ವಾಸನೆ ಬೀರುತ್ತಿದೆ. ಸತ್ತಿರುವ ಮೀನು, ಕಪ್ಪೆ ಮತ್ತಿತರ ಜಲಚರಗಳು ತೇಲುತ್ತಿದ್ದು, ನೀರು ಕುಡಿಯಲು ಆಗದಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಕಲುಷಿತಗೊಂಡಿರುವ ಈ ನೀರನ್ನು ಹೊಲಗಳಿಗೆ ಹಾಯಿಸಿದರೆ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ. ನದಿ ಬರಿದಾಗಿ ನೀರಿನ ಕೊರತೆ ಎದುರಾಗಿದ್ದ ಕಾರಣ ಹಿಡಕಲ್ ಜಲಾಶಯದಿಂದ ನದಿಗೆ 1.5 ಟಿಎಂಸಿ ನೀರನ್ನು ಬಿಡಲಾಗಿತ್ತು. ಈಗ ನೀರು ಕಲುಷಿತವಾಗಿರುವುದರಿಂದ ಕುಡಿಯುವ ನೀರಿಗೂ ಸಂಚಕಾರ ಬಂದಿದೆ.

‘ಪ್ರತಿ ಸಲ ಕಾರ್ಖಾನೆಯ ತ್ಯಾಜ್ಯ ನೀರು ನದಿಗೆ ಸೇರಿದಾಗ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹ ಪ್ರಕರಣ ಪದೇ ಪದೇ ಮರುಕಳಿಸುತ್ತಿದೆ’ ಎಂದು ಜಾಲಿಬೇರ ಗ್ರಾಮದ ರೈತ ಬಸಲಿಂಗಪ್ಪ ಮೇತ್ರಿ ಹೇಳಿದರು.

‘ನಿರಾಣಿ ಕಾರ್ಖಾನೆಯವರು ಜನ, ಜಾನುವಾರುಗಳ ಜೀವದ ಜತೆ ಚೆಲ್ಲಾಟ ಮುಂದುವರಿಸಿದ್ದಾರೆ, ಅಧಿಕಾರಿಗಳು ಕಾರ್ಖಾನೆ ವಿಷಯದಲ್ಲಿ ಮೌನವಾಗಿ
ದ್ದಾರೆ’ ಎಂದು ಅವರು ಆರೋಪಿಸಿದರು.

‘ಇದೇ ರೀತಿ ಘಟನೆ ಕಳೆದ ವರ್ಷ ನಡೆದಾಗ ಶಾಸಕ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.ಪಾಟೀಲ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಈಗ ಏಕೆ ಮೌನವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ, ಕಾರ್ಖಾನೆ ವಿರುದ್ಧ ತಕ್ಷಣ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಗ್ರಾಮದ ಯುವಕ ರವೀಂದ್ರ ಹೊರಟ್ಟಿ ಆಗ್ರಹಿಸಿದರು.

‘ನದಿಗೆ ಕಲುಷಿತ ನೀರನ್ನು ಉದ್ದೇಶ ಪೂರ್ವಕವಾಗಿ ಬಿಟ್ಟಿಲ್ಲ, ಕೈಮೀರಿದ ಘಟನೆ ನಡೆದಿದ್ದು, ಇದಕ್ಕಾಗಿ ವಿಷಾದಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಇಂಥ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು’ ಎಂದು ನಿರಾಣಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ (ಕಬ್ಬು) ಜಿ.ಬಿ. ಗಂಗರಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

–ಉದಯ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.