ADVERTISEMENT

`ಜಾತಿ ಮೀರಿದ ಕವಿ ಕುವೆಂಪು'

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2012, 20:02 IST
Last Updated 30 ಡಿಸೆಂಬರ್ 2012, 20:02 IST

ಮೈಸೂರು: ಕುವೆಂಪು ಅವರು ಶ್ರೇಷ್ಠ ಅಧ್ಯಾಪಕರಾಗಿ, ಸಾಹಿತಿಯಾಗಿ, ದಕ್ಷ ಆಡಳಿತಗಾರರಾಗಿ, ಮಹಾ ಮಾನವತಾವಾದಿಯಾಗಿ ವಿಶಿಷ್ಟ ಛಾಪು ಮೂಡಿಸಿ, ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿದ್ದಾರೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಹೇಳಿದರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ದೇಜಗೌ ಟ್ರಸ್ಟ್ ಸಹಯೋಗದಲ್ಲಿ ನಗರದ ವಿದ್ಯಾವರ್ಧಕ ಟ್ರಸ್ಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕುವೆಂಪು ಅವರ 109ನೇ ಜಯಂತಿ, ವಿಶ್ವಮಾನವ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರನ್ನು ಸರಿಗಟ್ಟುವವರು ಪ್ರಪಂಚದಲ್ಲಿ ಮತ್ತೊಬ್ಬರು ಇಲ್ಲ. ವಿಶ್ವದ ಅದ್ವಿತೀಯ ಜಾತ್ಯತೀತ ಕವಿ ಅವರು. ಸಾಹಿತ್ಯವಷ್ಟೇ ಅಲ್ಲ, ಸಕಲ ಕ್ಷೇತ್ರಗಳಲ್ಲೂ ಸಾಧನೆ ಮೆರೆದ ಧೀಮಂತ ವ್ಯಕ್ತಿ ಅವರು.

ಸಂಸ್ಕೃತ, ಕನ್ನಡ, ಇಂಗ್ಲಿಷ್ ಎಲ್ಲದರಲ್ಲೂ ಅಸಾಮಾನ್ಯ ಪ್ರತಿಭೆ ಹೊಂದಿದ್ದರು. ಅಧ್ಯಾತ್ಮ ವಿಷಯದಲ್ಲಿ ಭಾರತೀಯ, ಪಾಶ್ಚಾತ್ಯ ತತ್ವಗಳನ್ನು ಕರಗತಗೊಳಿಸಿಕೊಂಡಿದ್ದರು. ಪ್ರತಿ ಕ್ಷೇತ್ರದಲ್ಲೂ ಸೀಮಾರೇಖೆ ನಿರ್ಮಿಸಿದ ಗಾರುಡಿಗ. ಮಕ್ಕಳು, ಅಧಿಕಾರಿಗಳು, ಸಾಹಿತಿಗಳು ಎಲ್ಲರನ್ನು ಸೆಳೆಯುವ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಚಿಣ್ಣರಿಗೆ `ನನ್ನ ಗೋಪಾಲ' ನಾಟಕ, ಅಧಿಕಾರಿಗಳಿಗೆ `ನಿರಂಕುಶ ಮತಿ' ಪ್ರಬಂಧವು ಮಾರ್ಗದರ್ಶನ ಬರಹಗಳಾಗಿವೆ. ಕುವೆಂಪು ನಿಷ್ಠುರವಾದಿಯಾಗಿದ್ದರು, ಒತ್ತಡಗಳಿಗೆ ಜಗ್ಗುತ್ತಿರಲಿಲ್ಲ ಎಂದು ಗುಣಗಾನ ಮಾಡಿದರು.

ಕುವೆಂಪು ಕುಲಪತಿಯಾಗಿದ್ದಾಗ ಕನ್ನಡ ಆನರ್ಸ್‌ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಫೇಲಾಗಿದ್ದರಂತೆ. ಆಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಉತ್ತರಪತ್ರಿಕೆಗಳನ್ನು ಪರಿಶೀಲಿಸುವಂತೆ `ಅಣ್ಣ'ನಿಗೆ ಅಹವಾಲು ಹಾಕಿದರಂತೆ. ಆಗ ಕುವೆಂಪು ಮಗನ ಪತ್ರಿಕೆಯನ್ನೇ ತರಿಸಿ ನೋಡಿದಾಗ ಅದರಲ್ಲಿ ಛಿ ಬರೆಯುವ ಕಡೆ ಜಿ, ಛಿ ಬರೆಯುವೆಡೆ ಜಿ ಇತ್ಯಾದಿ ತಪ್ಪುಗಳು ಗೋಚರಿಸಿವೆ. ಮೌಲ್ಯಮಾಪಕರು ಉದಾರವಾಗಿ ಅಂಕ ನೀಡಿದ್ದಾರೆ, ಇನ್ನು ಕಡಿಮೆ ಅಂಕ ನೀಡಬೇಕಿತ್ತು ಎಂದು ಕುವೆಂಪು ಹೇಳಿದರಂತೆ. ಈ ಪ್ರಸಂಗವನ್ನು ತೇಜಸ್ವಿ ಅವರು `ಅಣ್ಣನ ನೆನಪು' ಕೃತಿಯಲ್ಲಿ ದಾಖಲಿಸಿದ್ದಾರೆ. ಕುವೆಂಪು ಅವರ ವಸ್ತುನಿಷ್ಠತೆ, ನಿಷ್ಪಕ್ಷಪಾತತೆ ಎಷ್ಟು ಅಚಲವಾಗಿತ್ತು ಎಂಬುದಕ್ಕೆ ಈ ಘಟನೆ ಒಂದು ಉದಾರಣೆ ಎಂದು ವಿವರಿಸಿದರು.

ದೇಜಗೌ ಟ್ರಸ್ಟ್ ವತಿಯಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು. ಡಾ.ಮ.ಗು.ಬಿರಾದಾರ, ಡಾ.ಕೆ.ಭೈರವಮೂರ್ತಿ ಅವರಿಗೆ ವಿಶ್ವಮಾನವ ಪ್ರಶಸ್ತಿ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಡಾ.ವಿಜಯಮಾಲಾ ರಂಗನಾಥ್ ಅವರಿಗೆ ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ದಿವಂಗತ ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷ ಪ್ರೊ.ಜೆ.ಶಶಿಧರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಮಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT