ADVERTISEMENT

ಜಾವಡೇಕರ್‌ ಹೈ–ಕ ಪ್ರವಾಸ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:36 IST
Last Updated 19 ಸೆಪ್ಟೆಂಬರ್ 2017, 19:36 IST

ನವದೆಹಲಿ: ಕರ್ನಾಟಕದ ವಿಧಾನಸಭೆ ಚುನಾವಣೆ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್‌ ಹಾಗೂ ಪೀಯೂಷ್‌ ಗೋಯಲ್‌ ರಾಜ್ಯದ ಉತ್ತರ ಭಾಗದಲ್ಲಿನ ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಇದೇ 21ರಿಂದ ಮೂರು ದಿನಗಳ ಕಾಲ ಹೈದರಾಬಾದ್‌– ಕರ್ನಾಟಕ ಭಾಗದ ಕಲಬುರ್ಗಿ, ಬೀದರ್‌, ಬಳ್ಳಾರಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಪ್ರವಾಸಕ್ಕೆ ತೆರಳಲಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಪೀಯೂಷ್‌ ಗೋಯಲ್‌ ಅವರ ಪ್ರವಾಸದ ದಿನ ಇನ್ನಷ್ಟೇ ನಿಗದಿಯಾಗಬೇಕಿದೆ.

ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭ ಸಭೆ ನಡೆಸಿ, ಪಕ್ಷದ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸಲಾಗಿದೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಒಗ್ಗಟ್ಟನ್ನು ತರಲು ಯತ್ನಿಸಲಾಗಿದೆ. 200ಕ್ಕೂ ಅಧಿಕ ಕಾರ್ಯಕರ್ತರ ಜೊತೆಗೆ ವೈಯಕ್ತಿವಾಗಿ ಮಾತುಕತೆ ನಡೆಸಲಾಗಿದ್ದು, ಮುಖಂಡರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿಲ್ಲ ಎಂದು ಸಚಿವ ಜಾವಡೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪಕ್ಷದ ಚುನಾವಣಾ ಸಮಿತಿಯು ಗೆಲುವಿನ ಅರ್ಹತೆಯ ಆಧಾರದ ಮೇಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಟಿಕೆಟ್‌ಗಾಗಿ ಪ್ರಭಾವ ಬೀರುವ ಸಾಧ್ಯತೆಗಳಿದ್ದು ಅದಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ನಾಲ್ಕೂವರೆ ವರ್ಷಗಳ ಅವಧಿಯ ಕಾಂಗ್ರೆಸ್‌ ದುರಾಡಳಿತದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು, ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ಎಡವಿರುವುದರ ಬಗ್ಗೆ ತಿಳಿಸುವುದೇ ಬಿಜೆಪಿಯ ಉದ್ದೇಶವಾಗಲಿದೆ. ಸರ್ಕಾರದ ವೈಫಲ್ಯದ ಬಗ್ಗೆ ಸಾರಿ ಹೇಳುವುದೇ ಚುನಾವಣಾ ಪ್ರಚಾರ ಸಭೆಗಳ ಮೂಲಮಂತ್ರವಾಗಲಿದೆ ಎಂದು ಅವರು ಒತ್ತಿಹೇಳಿದರು.

ಪ್ರತ್ಯೇಕ ಧರ್ಮ, ಪ್ರತ್ಯೇಕ ಧ್ವಜ ಹಾಗೂ ಹಿಂದಿ ಹೇರಿಕೆಯಂತಹ ಭಾವನಾತ್ಮಕ ವಿಷಯಗಳು ಕರ್ನಾಟಕದ ಮತದಾರರನ್ನು ಸೆಳೆಯಲಾರವು. ತಮ್ಮಲ್ಲೇ ಒಡಕು ಮೂಡಿಸಲು ಯತ್ನಿಸುವುದನ್ನೂ ಅಲ್ಲಿನ ಮತದಾರರು ಬೆಂಬಲಿಸುವುದಿಲ್ಲ. ಮತದಾರರನ್ನು ಸೆಳೆಯಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಯ ಕ್ಷಣದಲ್ಲಿ ಪರಿಚಯಿಸುತ್ತಿರುವ ಕಲ್ಯಾಣ ಯೋಜನೆಗಳೂ ಬಿಜೆಪಿಯ ಗೆಲುವನ್ನು ತಡೆಯಲಾರದು ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಚುನಾವಣೆ ಪ್ರಚಾರದ ಭರಾಟೆ ಆರಂಭವಾದ ನಂತರ ಈ ಅಲೆ ದೊಡ್ಡಮಟ್ಟದಲ್ಲಿ ಹೊರಹೊಮ್ಮಲಿದೆ. 150 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಬಿಜೆಪಿಯ ಗುರಿ ಈಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.