ADVERTISEMENT

ಡಾ.ವಾಲೀಕಾರ ವಿರುದ್ಧದ ಮೇಲ್ಮನವಿ ವಜಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ  ಡಾ. ಎಚ್.ಬಿ. ವಾಲೀಕಾರ ವಿರುದ್ಧದ ಎಫ್‌ಐಆರ್‌ ಅನೂರ್ಜಿತಗೊಳಿಸಿ, ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಗಳನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಈ ಮೇಲ್ಮನವಿಗಳ ವಿಚಾರಣೆಯನ್ನು ಧಾರವಾಡ ಹೈಕೋರ್ಟ್‌ನಲ್ಲಿ ಪೂರ್ಣಗೊಳಿಸಿ ಅಕ್ಟೋಬರ್‌ 7 ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಮತ್ತು ಸುಜಾತಾ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ಬೆಂಗಳೂರಿನ ಪ್ರಧಾನ ಪೀಠದಲ್ಲಿ  ಪ್ರಕಟಿಸಿದೆ. 

‘ಪ್ರಕರಣದ ತನಿಖೆಗೆ ರಾಜ್ಯಪಾಲರು ಏಕವ್ಯಕ್ತಿಯ ಸಮಿತಿ ರಚನೆ ಮಾಡಿರುವುದು ಕಾನೂನು ಬಾಹಿರ. ಕುಲಪತಿಗಳು ವಿಶ್ವವಿದ್ಯಾಲಯದ ಕಾರ್ಯ ನಿರ್ವಾಹಕ ಅಧಿಕಾರಿ. ಅವರನ್ನು ಇತರೆ ಅಧಿಕಾರಿಗಳ ಜೊತೆ ಸಮೀಕರಿಸಿ ನೋಡುವುದು ಸರಿಯಲ್ಲ. ಅವರ ವಿರುದ್ಧದ ಪ್ರಕರಣ ದಾಖಲು ಮಾಡುವ ಮುನ್ನ ಅವರ ಆಕ್ಷೇಪಣೆ ಆಲಿಸಲು ಮುಕ್ತ ಅವಕಾಶ ನೀಡಬೇಕಾಗಿತ್ತು. ಆದರೆ ಈ ಪ್ರಕರಣದಲ್ಲಿ ವಾಲೀಕಾರ ಅವರಿಗೆ ತಮ್ಮ ಆಕ್ಷೇಪಣೆ ಸಲ್ಲಿಸಲು ಮುಕ್ತ ಅವಕಾಶ ನೀಡದೆ ಇರುವುದು ಅನ್ಯಾಯ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಕ.ವಿ.ವಿ ಯಲ್ಲಿ ನೇಮಕಾತಿ ಹಾಗೂ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ವಿಚಾರಣೆ ನಡೆಸಲು ರಾಜ್ಯಪಾಲರು ನೇಮಿಸಿದ್ದ ವಿಚಾರಣಾ ಆಯೋಗ, ಅದರ ವರದಿ ಆಧರಿಸಿ ಸಲ್ಲಿಕೆಯಾಗಿದ್ದ ದೂರು ಮತ್ತು ಎಫ್‌ಐಆರ್‌ ಅನ್ನು ಹೈಕೋರ್ಟ್‌ನ ನ್ಯಾ. ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಅನೂರ್ಜಿತಗೊಳಿಸಿತ್ತು. ಇದನ್ನು  ಪ್ರಶ್ನಿಸಿ ರಾಜ್ಯಪಾಲರ ಕಚೇರಿ, ಲೋಕಾಯುಕ್ತ ಪೊಲೀಸರು ಹಾಗೂ ಕ.ವಿ.ವಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.

ವಾಲೀಕಾರ ಪ್ರತಿಕ್ರಿಯೆ: ‘ನ್ಯಾಯಾಲಯದ ತೀರ್ಪೇನೋ ಪರಿಹಾರವನ್ನು ನೀಡಿದೆ. ಆದರೆ ಆದ ಗಾಯ ಇನ್ನೂ ಮಾಯದೇ ಹಾಗೇ ಉಳಿದಿದೆ. ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ’ ಎಂದು ಡಾ. ಎಚ್‌.ಬಿ. ವಾಲೀಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.