ADVERTISEMENT

`ಢುಂಢಿ'ಲೇಖಕನಿಗೆ ಷರತ್ತುಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2013, 19:59 IST
Last Updated 30 ಆಗಸ್ಟ್ 2013, 19:59 IST

ಬೆಂಗಳೂರು: ವಿವಾದಿತ `ಢುಂಢಿ` ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ನಗರದ ಎಂಟನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.

`ಯೋಗೇಶ್ ಮಾಸ್ಟರ್ ತಮ್ಮ `ಢುಂಢಿ' ಕೃತಿಯಲ್ಲಿ ಗಣೇಶ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಭಾರತ ಹಿಂದೂ ಮಹಾಸಭಾದ ಪ್ರಣವಾನಂದ ರಾಮ ಸ್ವಾಮೀಜಿ ಎಂಬುವರು ಗುರುವಾರ ಕಲಾಸಿಪಾಳ್ಯ ಠಾಣೆಗೆ ದೂರು ಕೊಟ್ಟಿದ್ದರು.

ಆ ದೂರಿನ ಅನ್ವಯ ಲೇಖಕರನ್ನು ಬಂಧಿಸಿದ್ದ ಪೊಲೀಸರು, ಶುಕ್ರವಾರ ಬೆಳಿಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಜಾಮೀನು ಕೋರಿ ಲೇಖಕರ ಪರ ವಕೀಲರು ಅರ್ಜಿ ಸಲ್ಲಿಸಿದರು.

`ಪ್ರಣವಾನಂದ ರಾಮಸ್ವಾಮೀಜಿ ಅವರು ಕೃತಿಯ ಅಧ್ಯಯನ ನಡೆಸಿಲ್ಲ. ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಆಧರಿಸಿ ದೂರು ಕೊಟ್ಟಿರುವುದಾಗಿ ಅವರೇ ಹೇಳಿದ್ದಾರೆ. ಪುಸ್ತಕದಲ್ಲಿ ಅಡಕವಾಗಿರುವ ವಿಷಯದ ಬಗ್ಗೆ ಅವರಿಗೆ ಕೊಂಚವೂ ಜ್ಞಾನವಿಲ್ಲ. ಕೃತಿಯಲ್ಲಿರುವ ಯಾವ ಅಂಶ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ಅವರು ಎಲ್ಲಿಯೂ ತಿಳಿಸಿಲ್ಲ' ಎಂದು ವಕೀಲ ಜಗದೀಶ್ ಲೇಖಕರ ಪರ ವಾದ ಮಂಡಿಸಿದರು.

ಸುಮಾರು ಎರಡು ತಾಸು ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸಂಜೆ 4.30ಕ್ಕೆ ಆದೇಶವನ್ನು ಕಾಯ್ದಿರಿಸಿ ದರು. ಬಳಿಕ ಅವರ ಅರ್ಜಿಯನ್ನು ಪುರಸ್ಕರಿಸಿ ರೂ20,000ದ ವೈಯಕ್ತಿಕ ಬಾಂಡ್, ರೂ5,000 ನಗದು ಭದ್ರತೆ, ಒಬ್ಬರ ಭದ್ರತೆ ನೀಡಬೇಕು, ಪೊಲೀಸರ ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶ ಪಡಿಸಲು ಯತ್ನಿಸಬಾರದು, ಅನುಮತಿ ಇಲ್ಲದೇ ವಿದೇಶ ಪ್ರಯಾಣ ಬೆಳೆಸ ಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದರು.

ಕೃತಿ ಮಾರಾಟಕ್ಕೆ ತಾತ್ಕಾಲಿಕ ತಡೆ
`ಢುಂಢಿ` ಕೃತಿ ಮಾರಾಟಕ್ಕೆ ತಾತ್ಕಾಲಿಕ ತಡೆ ನೀಡಿ 38ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಐದು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಪ್ರಕರಣ ಇತ್ಯರ್ಥವಾಗುವವರೆಗೆ ಪುಸ್ತಕ ಮಾರಾಟ, ಮರು ಮುದ್ರಣ ಮತ್ತು ಮಾರುಕಟ್ಟೆ ಪೂರೈಕೆಗೆ ನಿಷೇಧ ವಿಧಿಸಿ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.