ADVERTISEMENT

ತಂತಿ ಟಿ.ವಿ.ಚಾನೆಲ್‌: ವಕೀಲರ ಕೆಂಗಣ್ಣು

ಬಿ.ಎಸ್.ಷಣ್ಮುಖಪ್ಪ
Published 24 ಅಕ್ಟೋಬರ್ 2014, 19:45 IST
Last Updated 24 ಅಕ್ಟೋಬರ್ 2014, 19:45 IST

ಬೆಂಗಳೂರು: ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ಕಲಾಪದ ಧ್ವನಿಮುದ್ರಣ ತಮಿಳಿನ ‘ತಂತಿ’ ಟಿ.ವಿ.ಚಾನೆಲ್‌ನಲ್ಲಿ ಪ್ರಸಾರವಾಗಿರುವುದು ಈಗ ಹೊಸ ವಿವಾದವನ್ನು ಸೃಷ್ಟಿಸಿದೆ.
‘ಕೋರ್ಟ್‌ಸಭಾಂಗಣದಲ್ಲಿ ಯಾವುದೇ ವೀಡಿಯೊ, ಛಾಯಾಚಿತ್ರ ತೆಗೆಯುವುದು, ಮೊಬೈಲ್‌ಇಲ್ಲವೇ ಇನ್ನಿತರೆ ಎಲೆಕ್ಟ್ರಾನಿಕ್‌ ವಸ್ತುಗಳ ಮೂಲಕ ಧ್ವನಿ ಯಾ ಚಿತ್ರ ದಾಖಲು ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಈ ಕಾನೂನು ಬಾಹಿರ ಚಟುವಟಿಕೆ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಅವರು ದೂರಲಾಗಿದೆ.

ಈ ಕುರಿತಂತೆ ಅಖಿಲ ಭಾರತ  ವಕೀಲರ ಪರಿಷತ್ತು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಲಿಖಿತ ಮನವಿ ಸಲ್ಲಿಸಿದೆ.
‘ಕೋರ್ಟ್‌ ಕಲಾಪವನ್ನು ಗುಪ್ತವಾಗಿ ಧ್ವನಿ­ಮುದ್ರಿಸಿ­ಕೊಂಡ ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು. ಅವರ ಹಾಗೂ ತಂತಿ ಟಿವಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಬೇಕು. ಕೋರ್ಟ್‌ ಅನುಮತಿ ಇಲ್ಲದೆ ವಿಚಾರಣೆಯ ಕಲಾಪಗಳು ಪ್ರಸಾರವಾಗಿವೆ. ಹಾಗಾಗಿ ಇದಕ್ಕೆ ಕಾರಣರಾದವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪರಿಷತ್‌ನ ರಿಜಿಸ್ಟ್ರಾರ್‌ ಜನರಲ್‌ ರವೀಂದ್ರ ಮೈಥಾನಿ  ಅವರನ್ನು ಮನವಿಯಲ್ಲಿ ಕೋರಲಾಗಿದೆ.

ದಾಖಲಿಸಿಕೊಂಡಿದ್ದು ಹೇಗೆ ?: ತಂತಿ ಟಿ.ವಿ.ಚಾನೆಲ್‌ ಈ ಸಂಗತಿಗಳನ್ನು ದಾಖಲಿಕೊಂಡಿದ್ದಾದರೂ ಹೇಗೆ ಎಂಬ ಜಿಜ್ಞಾಸೆ ಈಗ ಎಲ್ಲರನ್ನೂ ಕಾಡತೊಡಗಿದೆ. ಸುಪ್ರೀಂ ಕೋರ್ಟ್ ಸಭಾಂಗಣದ ಒಳಗೆ ಕೇವಲ ವಕೀಲರು ಮಾತ್ರವೇ ಮೊಬೈಲ್ ಫೋನ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇದೆ. ಹೀಗಾಗಿ ಕಲಾಪದ ಧ್ವನಿ ಮುದ್ರಣ ಮಾಡಿಕೊಂಡವರು ಯಾರು ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.

ಇದು ನ್ಯಾಯಾಂಗ ನಿಂದನೆ: ‘ಖಂಡಿತವಾಗಿಯೂ ಇದೊಂದು ಕ್ರಿಮಿನಲ್ ಸ್ವರೂಪದ ನ್ಯಾಯಾಂಗ ನಿಂದನೆ. ಇಂತಹ ನಡವಳಿಕೆಯಿಂದ ಜನರಿಗೆ ಸುಪ್ರೀಂ ಕೋರ್ಟ್ ಬಗ್ಗೆ ಇರುವ ಗೌರವ ಮತ್ತು ಘನತೆಗೆ ಧಕ್ಕೆ ಉಂಟಾಗುತ್ತದೆ. ಒಂದು ವೇಳೆ ಈ ಪ್ರಕರಣವನ್ನು ಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡರೆ ಅಂತಿಮವಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ವಿವೇಚನಾಧಿಕಾರ ಮುಖ್ಯ ನ್ಯಾಯಮೂರ್ತಿಗಳ ವ್ಯಾಪ್ತಿಗೆ ಒಳಪಡುತ್ತದೆ. ಇಂತಹ ಕ್ರಮ ಸಲ್ಲದು’ ಎಂಬ ಮಾತುಗಳನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್‌ ಹೇಳುತ್ತಾರೆ.

ಸ್ವಾತಂತ್ರ್ಯ ಸಲ್ಲ: ‘ಇದೊಂದು ತಪ್ಪು ಕೆಲಸ. ಕೋರ್ಟ್‌ ಪರವಾನಗಿ ಇಲ್ಲದೆ ಇಂತಹ ನಡವಳಿಕೆ ಪ್ರದರ್ಶಿಸಿರು­ವುದು ಕಾನೂನು ಬಾಹಿರ. ಅಷ್ಟಕ್ಕೂ ಕೋರ್ಟ್‌ ಇಂತಹ ಸಂಗತಿಗಳಿಗೆ ಅವಕಾಶ ಕೊಡುವುದೇ ಇಲ್ಲ’ ಎನ್ನುತ್ತಾರೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ.

‘ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಇಂತಹ ನಡೆ ಮೊದಲ ಬಾರಿಗೆ ಕಂಡು ಬಂದಿದೆ. ಕೋರ್ಟ್‌ ಕಲಾಪಗಳು ನಾಲ್ಕು ಗೋಡೆಯ ಮಧ್ಯೆ ನಡೆಯು­ವಂಥಾದ್ದು. ಇದನ್ನು ಈ ರೀತಿ ಬಹಿರಂಗ ಮಾಡಿದರೆ ಕೋರ್ಟಿನ ಘನತೆಗೆ ಚ್ಯುತಿ ಉಂಟಾಗುತ್ತದೆ. ಭವಿಷ್ಯ­ದಲ್ಲಿ ಇಂತಹ ಚಟುವಟಿಕೆ ನಡೆಯದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನಿಗಾ ವಹಿಸ­ಬೇಕು’ ಎಂಬುದು ಸುಬ್ಬಾರೆಡ್ಡಿ ಅವರ ಅಭಿಮತ.

‘ಕೋರ್ಟ್‌ ಕಲಾಪದ ವಿಚಾರಣೆಗಳನ್ನು ಈ ರೀತಿ ದಾಖಲು ಮಾಡಬಹುದಾದದ್ದು ಸಮಂಜಸ ಹೌದೋ ಅಲ್ಲವೋ ಎಂಬುದರ ಜೊತೆಗೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲ ಪ್ರಶ್ನೆಗಳನ್ನೂ ಈಗ ಚರ್ಚೆಗೆ ಗುರಿ ಮಾಡಿದೆ’ ಎಂಬುದು ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್‌ ಅವರ ಅಭಿಪ್ರಾಯ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದಿಂದ ಸೆರೆವಾಸಕ್ಕೆ ಗುರಿಯಾಗಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಜಯಾ ಅವರ ಜಾಮೀನು ಅರ್ಜಿಯನ್ನು ಬೆಂಗಳೂರು ಹೈಕೋರ್ಟ್‌ ತಿರಸ್ಕರಿಸಿತ್ತು. ಇದರಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಜಯಾ ಪರ ವಕೀಲ ಫಾಲಿ ನಾರಿಮನ್‌ ಅವರು  ಅಕ್ಟೋಬರ್‌17 ರಂದು ವಾದ ಮಂಡಿಸಿದ್ದರು. ಈ ವಾದದ ಧ್ವನಿಮುದ್ರಣವನ್ನು ಅ.18ರಂದು ‘ತಂತಿ’ ಟಿ.ವಿಯಲ್ಲಿ ಪ್ರಸಾರ ಮಾಡಲಾಗಿತ್ತು. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಅವರ ನೇತೃತ್ವದ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.