ADVERTISEMENT

ತಹಶೀಲ್ದಾರ್‌ಗೆ ಭೂದಾಖಲೆ ತಿದ್ದುಪಡಿ ಅಧಿಕಾರ: ಕಾಗೋಡು

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಶಿವಮೊಗ್ಗ: ಪಹಣಿ ಸೇರಿದಂತೆ ಭೂ ದಾಖಲೆಗಳ ಲೋಪ–ದೋಷಗಳನ್ನು ಸರಿಪಡಿಸುವ ಸಂಪೂರ್ಣ ಅಧಿಕಾರವನ್ನು ಶೀಘ್ರ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೇ ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮಲೆಕ್ಕಿಗರು ಸೇರಿದಂತೆ ಕೆಳ ಹಂತದ ಅಧಿಕಾರಿಗಳು ಮಾಡುವತಪ್ಪಿಗೆ ಭೂದಾಖಲೆಗಳಲ್ಲಿ ಲೋಪ ಕಂಡುಬಂದರೆ ರೈತರು ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಿದೆ. ಇದು ಅನಗತ್ಯ ವಿಳಂಬ ಹಾಗೂ ವೆಚ್ಚಕ್ಕೆ ಕಾರಣವಾಗುತ್ತಿದೆ. ಹಾಗಾಗಿ, ಎಲ್ಲ ರೈತರು ಹೊಸ ಆದೇಶದ ನಂತರ ಎಲ್ಲ ಸಮಸ್ಯೆಗಳಿಗೂ ತಹಶೀಲ್ದಾರ್‌ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದರು.

ರಾಜ್ಯದಲ್ಲಿ ಜಮೀನು ಸರ್ವೇ, ಪೋಡಿ ಮತ್ತಿತರ ಕಾರಣಗಳಿಗೆ 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನೂ ತ್ವರಿತವಾಗಿ ಇತ್ಯರ್ಥಪಡಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ ಎಂದರು.

ಮುಖ್ಯಮಂತ್ರಿ ಹುದ್ದೆ ಅಂಗಡಿಯಲ್ಲಿ  ಸಿಗುವ ಸಾಮಗ್ರಿಯೇ?
‘ಮುಖ್ಯಮಂತ್ರಿ ಹುದ್ದೆ ಎನ್ನುವುದು ಅಂಗಡಿಯಲ್ಲಿ ಸಿಗುವ ಸಾಮಗ್ರಿಯೇ?’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತೀಕ್ಷ್ಣವಾಗಿ ಪ್ರಶ್ನಿಸಿದರು.
ದಲಿತ ಮುಖ್ಯಮಂತ್ರಿ ಘೋಷಣೆ ಮೂಲಕ ಕಾಂಗ್ರೆಸ್‌ ಮುಂದಿನ ಚುನಾವಣೆ ಎದುರಿಸುತ್ತದೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕಾಗೋಡು, ಮುಖ್ಯಮಂತ್ರಿ ಆಕಾಂಕ್ಷಿಗಳು ಮೊದಲು ಸಂಘಟನೆಗೆ ಒತ್ತು ನೀಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿ, ನಂತರ ಮುಖ್ಯಮಂತ್ರಿ ಮಾಡೋಣ ಎಂದು ಕುಟುಕಿದರು.

ಮಂತ್ರಿ ಪದವಿಗೆ ಹೆಚ್ಚು ಮರ್ಯಾದೆ: ಸಚಿವನಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಅದ್ದೂರಿ ಸ್ವಾಗತ ನೀಡುತ್ತಾರೆ. ಅದೇ ಮರ್ಯಾದೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ನೀಡುವುದಿಲ್ಲ. ಮೂರು ವರ್ಷ ಆ ಹುದ್ದೆಯಲ್ಲಿ ಇದ್ದು ನ್ಯಾಯ ಸಲ್ಲಿಸಿದ್ದೇನೆ. ಪಕ್ಷ ಚಟುವಟಿಕೆಯಿಂದಲೂ ದೂರ ಉಳಿದಿದ್ದೆ. ಈಗ ಮತ್ತೆ ಪಕ್ಷ ಸಂಘಟಿಸುವ ಅವಕಾಶ ದೊರೆತಿದೆ. ವಿಧಾನಸಭೆಯ ಪೀಠದಲ್ಲಿ ಕುಳಿತು ಸರ್ಕಾರ ಎಚ್ಚರಿಸುತ್ತಿದ್ದೆ. ಅದೇ ಸೂಚನೆಗಳನ್ನು ಈಗ ಸಚಿವನಾಗಿ ಅನುಷ್ಠಾನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವ, ಪುತ್ರಿ ಡಾ.ನಂದಿನಿ ರಾಜಕೀಯ ಪ್ರವೇಶಿಸುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.