ADVERTISEMENT

ತುಂಡಾದ ಹಗ್ಗ, ಹೂತುಹೋದ ಚಕ್ರ

ನಂಜನಗೂಡು ರಥೋತ್ಸವದಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

ನಂಜನಗೂಡು: ದಕ್ಷಿಣ ಕಾಶಿಯೆಂದು ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಪ್ರಯುಕ್ತ ಪಂಚಮಹಾ ರಥೋತ್ಸವ ಬುಧವಾರ ಬೆಳಿಗ್ಗೆ ವಿಜೃಂಭಣೆಯಿಂದ ಜರುಗಿತು.

ಆದರೆ, ಶ್ರೀಕಂಠೇಶ್ವರ ಸ್ವಾಮಿಯ 110 ಟನ್ ಭಾರದ ಗೌತಮ ರಥ ಹಾಗೂ ಪಾರ್ವತಮ್ಮನವರ ರಥದ ಚಕ್ರಗಳು ನೆಲದಲ್ಲಿ ಹೂತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಥಬೀದಿಯಲ್ಲಿ ನೀರಿನ ಪೈಪ್ ಹೂಳಲು ತೆಗೆದಿದ್ದ ಗುಂಡಿಯನ್ನು ಸರಿಯಾಗಿ ಮುಚ್ಚದೆ ಇರುವುದರಿಂದ ರಾಕ್ಷಸ ಮಂಟಪ ವೃತ್ತದ ಬಳಿ ರಥದ ಚಕ್ರಗಳು ಮಣ್ಣಿನಲ್ಲಿ ಹೂತುಕೊಂಡವು. ನಂತರ ಕ್ರೇನ್ ಮತ್ತು ಜೆಸಿಬಿ ಯಂತ್ರ ಬಳಸಿ ರಥಗಳನ್ನು ಸ್ವಸ್ಥಾನ ಸೇರಿಸಲಾಯಿತು. 50 ನಿಮಿಷದ ಅವಧಿಯಲ್ಲಿ ಸ್ವಸ್ಥಾನ ಸೇರುತ್ತಿದ್ದ ರಥಗಳು ಅಡಚಣೆಯಿಂದಾಗಿ 3 ಗಂಟೆಗಳ ಅವಧಿ ಪಡೆದವು. ಅಲ್ಲದೆ, ಹೊಸದಾಗಿ ಖರೀದಿಸಿದ್ದ ರಥದ ಹಗ್ಗವು ಜಗ್ಗಾಟದಿಂದ 2 ಬಾರಿ ತುಂಡಾಗಿದ್ದರಿಂದ ಮತ್ತೆ ಹಳೆಯ ಹಗ್ಗವನ್ನೇ ಬಳಸಿ ರಥ ಎಳೆಯಲಾಯಿತು.

ಇದಕ್ಕೂ ಮೊದಲು ಬೆಳಿಗ್ಗೆ 6.30 ಗಂಟೆಗೆ ವಿವಿಧ ಬಣ್ಣದ ಹೂಗಳಿಂದ ಹಾಗೂ ಬಣ್ಣದ ಬಾವುಟಗಳಿಂದ ಸರ್ವ ಅಲಂಕಾರ ಭೂಷಿತವಾದ ಗೌತಮ ರಥಕ್ಕೆ ಸ್ವಾಮಿಯವರ ಉತ್ಸವ ಮೂರ್ತಿ ಯನ್ನು ಪುರೋಹಿತರು ತಂದು ಪ್ರತಿ ಷ್ಠಾಪಿಸಿ, ಪೂಜಾಕಾರ್ಯಗಳನ್ನು ನಡೆಸಿ ದರು. ನಂತರ ರಥಕ್ಕೆ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ತಮ್ಮ ಪತ್ನಿ ಸೌಭಾಗ್ಯಾ ಅವರೊಡನೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಚಾಲನೆ  ನೀಡಿದರು. ಮೊದಲಿಗೆ ಗಣಪತಿ ದೇವರ ಮೂರ್ತಿಯನ್ನು ಹೊತ್ತ ರಥ ಮುನ್ನಡೆಯಿತು. ನಂತರ 6.40ರ ಮೀನ ಲಗ್ನದಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ಗೌತಮ ರಥ ವನ್ನು ಭಕ್ತರು ಜಯಘೋಷ ಹಾಕುತ್ತಾ ಎಳೆದರು.

ಸ್ವಾಮಿಯ ರಥದ ಮುಂಭಾಗದಲ್ಲಿ ವಿಶ್ವೇಶ್ವರ ಜೋಯಿಸ್ ಅವರ ನೇತೃತ್ವ ದಲ್ಲಿ ರುದ್ರ, ಚಾಮರ, ಶ್ರಿ ಸೂಕ್ತ, ಪುರುಷ ಸೂಕ್ತ, ಅರುಣ ಪರಾಯಣ, ವೇದ ಘೋಷ ಮಾಡುತ್ತಾ ವೃತ್ವಿಕರು ರಥಬೀದಿಯಲ್ಲಿ ಸಾಗಿದರು. ಭಕ್ತರು ರಥಕ್ಕೆ ಹಣ್ಣು ಹಾಗೂ ದವನ ಎಸೆಯುವ ಮೂಲಕ ನಮನ ಸಲ್ಲಿಸಿದರು.

ಮಂಗಳವಾರ ಬೆಳಿಗ್ಗೆಯಿಂದ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಕಪಿಲಾ ನದಿಯಲ್ಲಿ ಮಿಂದು, ಒದ್ದೆ ಬಟ್ಟೆಯಲ್ಲಿ ದೇವಾಲಯದ ಪ್ರದಕ್ಷಿಣೆ ಮಾಡಿ ಧೂಪ, ದೀಪಗಳ ಸೇವೆ ಕೈಗೊಂಡರು. ದೇವಾಲ ಯದ ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ರಾತ್ರಿ ದಿಢೀರನೆ ಸುರಿದ ಮಳೆಯಿಂದಾಗಿ  ಭಕ್ತರು ತೊಂದ ರೆಗೆ ಸಿಲುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.