ADVERTISEMENT

ದಬ್ಬಾಳಿಕೆ ಗೊತ್ತಿದ್ದರೂ ಬೆದರಿದ್ದ ಸದಸ್ಯರು

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಕೈಯಿಂದ ಹಂದಿ ಗೂಡು ತೊಳೆಸುತ್ತಿದ್ದ ಸದಸ್ಯ!

ಅದಿತ್ಯ ಕೆ.ಎ.
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ವಿರಾಜಪೇಟೆ ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿ ಕಚೇರಿ
ವಿರಾಜಪೇಟೆ ಸಮೀಪದ ಕಣ್ಣಂಗಾಲ ಗ್ರಾಮ ಪಂಚಾಯಿತಿ ಕಚೇರಿ   

ಮಡಿಕೇರಿ: ವಿರಾಜಪೇಟೆ ತಾಲ್ಲೂಕು ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀತ ಪ್ರಕರಣದಲ್ಲಿ ಅಧ್ಯಕ್ಷೆ ವೈ.ಎಸ್‌. ಈಶ್ವರಿ ಅವರಿಗೆ ಪಂಚಾಯಿತಿ ಸಭೆಗಳಲ್ಲಿ ಮಾತ್ರ ಸದಸ್ಯ ಕೆ.ಎಸ್‌.ಗೋಪಾಲಕೃಷ್ಣ ಹೇಳಿದಂತೆ ಕೇಳುವುದು ಆಗಿರಲಿಲ್ಲ. ಅವರ ಮನೆಯಲ್ಲಿ ಸಾಕಿದ್ದ ಹಂದಿಗಳ ಗೂಡು ಸ್ವಚ್ಛ ಮಾಡಬೇಕಿತ್ತು, ಹಂದಿ ಗಳಿಗೆ ಅವರಿವರ ಮನೆ, ಹೋಟೆಲ್‌ ಗಳಲ್ಲಿ ಉಳಿದ ಅನ್ನ ತಂದು ಹಾಕುವ ಕಾಯಕ ಮಾಡಬೇಕಿತ್ತು!

ಒಂದು ವೇಳೆ ನಿತ್ಯ ಹೇಳಿದ ಕೆಲಸ ನಿಭಾಯಿಸದಿದ್ದರೆ ಈಶ್ವರಿ ಸೇರಿದಂತೆ ಆಕೆಯ ಇಬ್ಬರು ಮಕ್ಕಳು ಹಾಗೂ ಪತಿ ಹಿಂಸೆ ಅನುಭವಿಸಬೇಕಿತ್ತು. ಉಪವಾಸ ಬೀಳುವ ಸ್ಥಿತಿಯೂ ಇತ್ತು.

ಮೂಲತಃ ಕುಶಾಲನಗರದವರಾದ ಈಶ್ವರಿ, ವಿರಾಜಪೇಟೆ ಆರ್ಜಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ನಂತರ, ಕಣ್ಣಂಗಾಲದ ಗೋಪಾಲಕೃಷ್ಣ ಬಳಿ ಕೆಲಸಕ್ಕೆ ಸೇರಿಕೊಂಡರು. ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ವಾರ್ಡ್‌ಗೆ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ ಈಶ್ವರಿ ಅವರನ್ನೇ ಕಣಕ್ಕೆ ಇಳಿಸಿ, ಗೆಲ್ಲುವಂತೆ ನೋಡಿಕೊಂಡಿದ್ದರು. ಅಲ್ಲದೇ ಗೋಪಾಲಕೃಷ್ಣ ಸಹ ಕಾಂಗ್ರೆಸ್‌ ಬೆಂಬಲದೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ನಂತರ, ತಾನೇ ಅಧ್ಯಕ್ಷರಾಗಬೇಕು ಎಂಬ ಹಂಬಲದಿಂದ ‘ಪುರುಷ ಸಾಮಾನ್ಯ ವರ್ಗ’ಕ್ಕೆ ಮೀಸಲಾತಿ ತರಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಮೀಸಲಾತಿಯಂತೆ ಈಶ್ವರಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಿತು. ಅಂದಿನಿಂದ ಆಕೆ ಮೇಲೆ ದಬ್ಬಾಳಿಕೆ ನಡೆಸಲು ಆರಂಭಿಸಿದ್ದರು ಎನ್ನುತ್ತಾರೆ ಕೆಲ ಸದಸ್ಯರು.

ಅಧ್ಯಕ್ಷೆ ಪಕ್ಕದಲ್ಲೇ ಕುರ್ಚಿ!: ಈಶ್ವರಿ ಅಧ್ಯಕ್ಷೆಯಾಗಿ ಆಯ್ಕೆಗೊಂಡ ನಂತರ ಗೋಪಾಲಕೃಷ್ಣ ಆಕೆಯನ್ನು ಇತರೆ ಸದಸ್ಯರೊಂದಿಗೆ ಬೆರೆಯಲು, ಮಾತನಾಡಲು ಬಿಡುತ್ತಿರಲಿಲ್ಲ. ಗ್ರಾಮಸಭೆ, ವಿಶೇಷ ಸಭೆಗಳಿಗೆ ತನ್ನ ಕಾರಿನಲ್ಲೇ ಕರೆದುಕೊಂಡು ಬರುತ್ತಿದ್ದರು. ಅಧ್ಯಕ್ಷೆ ಮಾಡಬೇಕಾದ ಕೆಲಸವನ್ನು ಪಕ್ಕದಲ್ಲಿ ಕುಳಿತು ತಾನೇ ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅಧ್ಯಕ್ಷೆಗೆ ಸಭೆಯಲ್ಲಿ ಮಾತನಾಡಲು ಬಿಡುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸ್ವಾತಂತ್ರ್ಯ ಕಸಿದುಕೊಂಡಿದ್ದರು ಎಂದು ಸದಸ್ಯರು ಹೇಳುತ್ತಾರೆ.

‘ಪತಿ, ಇಬ್ಬರು ಮಕ್ಕಳೊಂದಿಗೆ 9 ವರ್ಷಗಳಿಂದ ಗೋಪಾಲಕೃಷ್ಣ ಅವರ ತೋಟದಲ್ಲಿ ದುಡಿಯುತ್ತಿದ್ದೆವು. ಬೆಳಗಿನಿಂದ ಸಂಜೆಯವರೆಗೆ ದುಡಿದರೂ ₹ 100 ಕೂಲಿ ಕೊಡುತ್ತಿದ್ದರು. ತಮ್ಮ ತೋಟದಲ್ಲಿ ಕೆಲಸವಿಲ್ಲದಿದ್ದಾಗ ಬೇರೆಯವರ ತೋಟದ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ದುಡ್ಡನ್ನು ನಮಗೆ ಕೊಡುತ್ತಿರಲಿಲ್ಲ’ ಎಂದು ಆರೋಪಿಸುತ್ತಾರೆ ಅಧ್ಯಕ್ಷೆ ಈಶ್ವರಿ.

ಜೀವ ಬೆದರಿಕೆ: ಅಧ್ಯಕ್ಷೆ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಪಂಚಾಯಿತಿ ಇತರ ಸದಸ್ಯರಿಗೆ ಮಾಹಿತಿಯಿತ್ತು. ಯಾರೂ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ವಿಷಯ ಬಹಿರಂಗ ಪಡಿಸದಂತೆ ಗೋಪಾಲಕೃಷ್ಣ ಬೆದರಿಕೆ ಹಾಕಿದ್ದರು. ಇದೀಗ ಪ್ರಕರಣ ಬೆಳಕಿಗೆ ತಂದಿರುವ ಕಾರ್ಮಿಕ ಮುಖಂಡ ಪಿ.ಆರ್‌.ಭರತ್‌ ಅವರಿಗೂ ಜೀವ ಬೆದರಿಕೆ ಹಾಕಿದ್ದಾರೆ.

ಕೇರಳಕ್ಕೆ ತೆರಳಿರುವ ಸದಸ್ಯ ಗೋಪಾಲಕೃಷ್ಣ?
ವಿರಾಜಪೇಟೆ/ಸಿದ್ದಾಪುರ:
ಕಣ್ಣಂಗಾಲ ಗ್ರಾ.ಪಂ ಕಚೇರಿಗೆ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುರಳಿ ದುರ್ಗಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹಾದೇವಸ್ವಾಮಿ, ವಿರಾಜಪೇಟೆ ವೃತ್ತ ನಿರೀಕ್ಷಕ ನಾಗಪ್ಪ ಭೇಟಿ ನೀಡಿ ಪರಿಶೀಲಿಸಿದರು.

ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗೋಪಾಲಕೃಷ್ಣ  ನಾಪತ್ತೆಯಾಗಿದ್ದಾರೆ. ಗುರುವಾರ ಅಧ್ಯಕ್ಷೆ ವೈ.ಎಸ್‌.ಈಶ್ವರಿ ಅಧ್ಯಕ್ಷತೆಯಲ್ಲೇ ಮಾಸಿಕ ಸಭೆ ಕೂಡ ನಡೆದಿತ್ತು. ಸಭೆಗೂ ಗೋಪಾಲಕೃಷ್ಣ ಗೈರಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕೇರಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಎಲ್ಲ ಬೆಳವಣಿಗೆ ನಂತರ ಈಶ್ವರಿ ಅವರು ಗೋಪಾಲಕೃಷ್ಣ ತೋಟದ ಮನೆಬಿಟ್ಟು ಸಿದ್ದಾಪುರದ ಸಮೀಪದ ಬರಡಿ ಎಂಬ ಗ್ರಾಮದ ತಮ್ಮ ಅತ್ತೆಯ ಮನೆ ಸೇರಿದ್ದಾರೆ. ಅಲ್ಲಿಂದಲೇ ಕಣ್ಣಂಗಾಲಕ್ಕೆ ಆಗಮಿಸಿ ಎರಡು ದಿನಗಳಿಂದ ಪಂಚಾಯಿತಿ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
‘ಎಲ್ಲರ ಬೆಂಬಲ ಸಿಕ್ಕಿರುವುದರಿಂದ ಧೈರ್ಯ ಬಂದಿದ್ದು, ಸಭೆಗಳನ್ನು ಇನ್ನೂ ನಾನೇ ನಿಭಾಯಿಸುತ್ತೇನೆ’ ಎನ್ನುತ್ತಾರೆ ಈಶ್ವರಿ.

* ಚುನಾವಣೆಗೆ ಒತ್ತಾಯವಾಗಿ ಸ್ಪರ್ಧಿಸುವಂತೆ ಮಾಡಿದ್ದರು. ಅವರ ಅಣತಿಯಂತೆ ಕಾರ್ಯ ನಿರ್ವಹಿಸಬೇಕಿತ್ತು.  ಕಳೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಅವಕಾಶ ನೀಡಿರಲಿಲ್ಲ.
–ಈಶ್ವರಿ,
ಅಧ್ಯಕ್ಷೆ, ಕಣ್ಣಂಗಾಲ ಗ್ರಾ.ಪಂ.

* ನಾಪತ್ತೆಯಾಗಿರುವ ಗೋಪಾಲಕೃಷ್ಣ ಬಂಧನಕ್ಕೆ ವಿರಾಜಪೇಟೆ ಡಿವೈಎಸ್‌ಪಿ ನಾಗಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ಶೀಘ್ರ ಬಂಧಿಸಲಾಗುವುದು.
–ಪಿ.ರಾಜೇಂದ್ರ ಪ್ರಸಾದ್‌   
ಎಸ್‌ಪಿ, ಕೊಡಗು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.