ADVERTISEMENT

ನಕಲಿ ಪಿಎಚ್‌ಡಿ: 40 ಅಭ್ಯರ್ಥಿಗಳ ಆಯ್ಕೆ ರದ್ದು

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆ

ಎಸ್‌.ಸಂಪತ್‌
Published 2 ಜನವರಿ 2017, 20:24 IST
Last Updated 2 ಜನವರಿ 2017, 20:24 IST
ನಕಲಿ ಪಿಎಚ್‌ಡಿ: 40 ಅಭ್ಯರ್ಥಿಗಳ ಆಯ್ಕೆ ರದ್ದು
ನಕಲಿ ಪಿಎಚ್‌ಡಿ: 40 ಅಭ್ಯರ್ಥಿಗಳ ಆಯ್ಕೆ ರದ್ದು   
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ (24 ವಿಷಯಗಳ 2160 ಹುದ್ದೆ) ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ನಕಲಿ ಶೈಕ್ಷಣಿಕ ದಾಖಲೆ ಸಲ್ಲಿಸಿದ್ದ 40 ಅಭ್ಯರ್ಥಿಗಳ ಆಯ್ಕೆ ರದ್ದು ಮಾಡಲಾಗಿದೆ. 
 
ಈ ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‌.ಡಿ ಪದವಿ ಪ್ರಮಾಣ ಪತ್ರ ನಕಲಿ ಎಂಬುದೇ ಅವರ ಅಭ್ಯರ್ಥಿತನ ರದ್ದಾಗಲು ಪ್ರಮುಖ ಕಾರಣ.
 
ಇವರಲ್ಲಿ ಇಂಗ್ಲಿಷ್‌ ವಿಷಯದ 25, ವಾಣಿಜ್ಯ ವಿಷಯದ ಏಳು, ಕಂಪ್ಯೂಟರ್‌ ಸೈನ್ಸ್‌ನ ಆರು, ಗಣಿತ ಮತ್ತು ರಾಜ್ಯಶಾಸ್ತ್ರ ವಿಷಯಗಳ ತಲಾ ಒಬ್ಬರು ಸೇರಿದ್ದಾರೆ. 
 
ಹೊರ ರಾಜ್ಯದ ವಿ.ವಿಗಳ ಪಿಎಚ್‌.ಡಿ: ಈ ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್.ಡಿ ಪ್ರಮಾಣ ಪತ್ರಗಳು ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳದ್ದಾಗಿದ್ದವು. ಸರ್ಕಾರಿ ಆದೇಶದ (ಇಡಿ/398/ಯುಆರ್‌ಸಿ2014 ದಿನಾಂಕ 14/10/2014) ಪ್ರಕಾರ  ರಾಜ್ಯದ ಹೊರಗಿನ ವಿ.ವಿಗಳ ಪಿಎಚ್‌.ಡಿ ಪದವಿಗಳ ನೈಜತೆಯನ್ನು ಕೆಇಎ ಪರಿಶೀಲನೆಗೆ ಒಳಪಡಿಸಿತ್ತು. 
 
‘ಪರಿಶೀಲನಾ ವರದಿಯಲ್ಲಿ ಈ ಅಭ್ಯರ್ಥಿಗಳ ಪಿಎಚ್‌.ಡಿ ನೈಜತೆಯಿಂದ ಕೂಡಿಲ್ಲ ಎಂದು ಉಲ್ಲೇಖವಾಗಿದೆ. ಹಾಗಾಗಿ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸಿ  ಆಯ್ಕೆಪಟ್ಟಿ ಪ್ರಕಟಿಸಲಾಗಿದೆ’ ಎಂದು ಕೆಇಎ ಆಡಳಿತಾಧಿಕಾರಿ ಗಂಗಾಧರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 
 
‘ನಕಲಿ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಿ ನೇಮಕ ಹೊಂದಲು ಮುಂದಾಗಿದ್ದ ಈ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರವು ಸರ್ಕಾರಕ್ಕೆ ಪತ್ರ ಬರೆಯಲಿದೆ’ ಎಂದು ಅವರು ಮಾಹಿತಿ ನೀಡಿದರು. 
 
ಕಾಯ್ದಿರಿಸಿದ 19 ಹುದ್ದೆಗಳು: ಕೆಲ ಅಭ್ಯರ್ಥಿಗಳು ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ 19 ಹುದ್ದೆಗಳನ್ನು ಕೆಇಎ ಕಾಯ್ದಿರಿಸಿದೆ. ಮ್ಯಾನೇಜ್‌ಮೆಂಟ್‌ ವಿಷಯದ ಎಂಟು, ವಾಣಿಜ್ಯ ವಿಷಯದ ಆರು, ಹಿಂದಿ ಎರಡು, ರಸಾಯನ ವಿಜ್ಞಾನ, ಗಣಿತ, ಸಾಮಾಜಿಕ ಕಾರ್ಯ ವಿಷಯಗಳಲ್ಲಿ ತಲಾ ಒಂದರಂತೆ ಹುದ್ದೆಗಳನ್ನು ಕಾಯ್ದಿರಿಸಿದೆ.

ಸುತ್ತೋಲೆಯಿಂದ ಹೊರಬಿದ್ದ 55 ಅಭ್ಯರ್ಥಿಗಳು: ಹೈದರಾಬಾದ್‌– ಕರ್ನಾಟಕ ಮೀಸಲಾತಿಗೆ ಸಂಬಂಧಿಸಿದಂತೆ 2016ರ ನವೆಂಬರ್‌ 16ರಂದು ಹೈದರಾಬಾದ್‌ ಕರ್ನಾಟಕ ವಿಶೇಷ ಕೋಶ ಹೊರಡಿಸಿದ ಸುತ್ತೋಲೆಯಿಂದಾಗಿ ಕೆಇಎ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಆ ಪಟ್ಟಿಯಿಂದ 55 ಅಭ್ಯರ್ಥಿಗಳು ಹೊರಬಿದ್ದಿದ್ದರು. ಅವರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಕೆಇಎ ಮಾನ್ಯ ಮಾಡಿಲ್ಲ.

‘ನೇಮಕಾತಿ ಪ್ರಕ್ರಿಯೆ ಕೊನೆ ಹಂತದಲ್ಲಿ ಇರುವಾಗ ಸರ್ಕಾರ ಹೊರಡಿಸಿದ ಸುತ್ತೋಲೆಯಿಂದಾಗಿ ನಾವು ಉದ್ಯೋಗವಂಚಿತರಾಗಿದ್ದೇವೆ. ಹಾಗಾಗಿ ಈ ಸುತ್ತೋಲೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ’ ಎಂದು ಅಭ್ಯರ್ಥಿಗಳಾದ ಎ.ಎಂ.ಸತೀಶ್‌, ಯೋಗೇಶ್‌, ಜೆ.ಬಿ. ಮಂಜುನಾಥ್‌ ಪ್ರತಿಕ್ರಿಯಿಸಿದ್ದಾರೆ.

ಮೀಸಲಾತಿ ದುರ್ಬಳಕೆ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕೆಲವರು ಮೀಸಲು ಕೋಟಾ ಕುರಿತು ಸುಳ್ಳು ಮಾಹಿತಿ ನೀಡಿ ‘ಸ್ಲೆಟ್‌’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂತಹ ಅಭ್ಯರ್ಥಿಗಳು ಕೆಇಎ ಪ್ರಕಟಿಸಿರುವ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆದಿದ್ದಾರೆ. ಈ ಕುರಿತು ಪೂರಕ ದಾಖಲೆಗಳನ್ನು ಒದಗಿಸಿದ್ದರೂ ಕೆಇಎ ಕ್ರಮ ತೆಗೆದುಕೊಂಡಿಲ್ಲ ಎಂದು ಸಮಾಜಶಾಸ್ತ್ರ ವಿಷಯದ ಅಭ್ಯರ್ಥಿ ಪುರುಷೋತ್ತಮ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕೆಇಎ ಆಡಳಿತಾಧಿಕಾರಿ ಎಸ್‌.ಎನ್‌ . ಗಂಗಾಧರಯ್ಯ ಅವರು, ‘ಕೆಇಎ ಸರ್ಕಾರ ನಡೆಸುತ್ತಿರುವ ನೇಮಕಾತಿ ಪ್ರಾಧಿಕಾರ. ಕಾಲ ಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶ, ಸುತ್ತೋಲೆ­ಗಳನ್ನು ಜಾರಿ ಮಾಡಬೇಕಾ­ದದ್ದು ನಮ್ಮ ಕರ್ತವ್ಯ. ಅದನ್ನು ನಾವು ಪ್ರಶ್ನಿಸುವಂತಿಲ್ಲ. ಇನ್ನು ಸ್ಲೆಟ್‌ ಪರೀಕ್ಷೆ ಬರೆದಿದ್ದ ಪಿ.ಯು ಉಪನ್ಯಾಸಕರು ಯಾವ ಮೀಸಲು ಕೋಟಾದಲ್ಲಿ ಬರೆದಿದ್ದರು ಎಂಬುದು ನಮಗೆ ಗೊತ್ತಿಲ್ಲ. ಈ ಕುರಿತು ಸಂಬಂಧಿಸಿದ ಪ್ರಾಧಿಕಾರದಿಂದಲೇ ಅಧಿಕೃತವಾಗಿ ಪತ್ರ ಬಂದರೆ, ಪರಿಶೀಲಿಸಿ ಸುಳ್ಳು ಮಾಹಿತಿ ನೀಡಿದವರನ್ನು ಪಟ್ಟಿಯಿಂದ ಕೈಬಿಡುತ್ತೇವೆ’ ಎಂದರು.

ಕೆಇಎ ಪ್ರಕಟಿಸಿರುವ ನಕಲಿ ಪಿಎಚ್‌.ಡಿ ದಾಖಲೆ ಸಲ್ಲಿಸಿದವರ ಪಟ್ಟಿ
ಇಂಗ್ಲಿಷ್‌ ವಿಷಯ:
ಎಂ.ಬಿ.ನೂರ್‌ ಅಹಮದ್‌, ಎಂ. ಮಂಜುನಾಥ, ಕಾಶಿನಾಥ್‌, ಖಾಜಾ ಹುಸೇನ್‌, ಕೆ.ಧರ್ಮಪ್ಪ, ಅಶ್ವಿನ್‌ ಕುಮಾರ್‌, ಈರಣ್ಣ, ಬಿ. ಸಂಧ್ಯಾರಾಣಿ, ವಡ್ಡರ ಸೋಮನಾಥ, ಸೋಮಶೇಖರ ಮಡಿವಾಳರ, ಗೀತಾ ಗೊಂಡ್ಕರ್‌, ಶಶಿಧರ್‌ ಚವಾನ್‌, ನೂರಾ ಸಾಬ್‌, ಸುಧಾಕರ್‌, ಮೈನುದ್ದೀನ್‌ ಸಾಬ್‌ ಬೀಳಗಿ, ಪಾಂಡುರಂಗ ಪುರದ್‌, ಎಲ್‌.ಜಿ.ಸೌಮ್ಯಾ, ಖಂಡೋಬಾ ಟಿಕಾರೆ, ಶ್ರೀಮಂತರಾವ್‌, ಸಿದ್ದಪ್ಪ ಓಲೇಕಾರ್‌, ಕಾವೇರಿ, ಸಂಗಮೇಶ್‌ ಪಟ್ಟಣದ್‌, ಅನಿಲ್‌ ಕುಮಾರ್‌ ತೋಂಟಾಪುರ್‌, ವೀರೇಂದ್ರ, ಬಿ. ಭಾಗ್ಯಶ್ರೀ ಆಕಳವಾಡಿ.

ವಾಣಿಜ್ಯ ವಿಷಯ:  ಜಿ. ಆಶಾಲತಾ, ಭಾರತೀ ರಾಮಣ್ಣ, ವೀರೇಶ್‌, ಶಿವರಾಜ್‌, ಮೊಹಮದ್‌ ಮುಸಾಯಿಬ್‌ ಉಲ್ಲಾ ಖಾನ್‌, ಭೀಮಣ್ಣ, ಉದಯ್ ಕುಮಾರ್‌.
ಕಂಪ್ಯೂಟರ್‌ ಸೈನ್ಸ್‌:ಮೊಹಮದ್‌ ಶಫಿ, ಚಂದ್ರಶೇಖರ್‌ ಎಂ. ಬೀದಿಮನಿ, ರಮೇಶ್‌, ಎಸ್‌. ವಿಜಯ್‌ ಕುಮಾರ್‌, ಶೋಭಾ, ಅತಿಶ್‌ ಧಾಲೆ.

ಗಣಿತ ವಿಷಯದಲ್ಲಿ ಎ. ವಾಣಿಶ್ರೀ ಹಾಗೂ ರಾಜ್ಯಶಾಸ್ತ್ರದಲ್ಲಿ ಎಂ.ಎಚ್‌.ರಹಮತ್‌ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.