ADVERTISEMENT

‘ನನ್ನ ಜೀವನದಲ್ಲಿ ಇಂಥ ಬರ ನೋಡಿಲ್ಲ’

ಸಿ.ಕೆ.ಮಹೇಂದ್ರ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
‘ನನ್ನ ಜೀವನದಲ್ಲಿ ಇಂಥ ಬರ ನೋಡಿಲ್ಲ’
‘ನನ್ನ ಜೀವನದಲ್ಲಿ ಇಂಥ ಬರ ನೋಡಿಲ್ಲ’   

ತುಮಕೂರು: ದೇಶದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಎರಡನೇ ಜಿಲ್ಲೆಯೆಂಬ ಖ್ಯಾತಿಯ ‘ಕಲ್ಪತರು ನಾಡಿ’ನಲ್ಲಿ ಎಲ್ಲೆಲ್ಲೂ ಒಣಗಿರುವ  ತೋಟಗಳೇ ಕಾಣುತ್ತವೆ.

ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದು, ಕೊಳವೆಬಾವಿ ಕೊರೆಸಿದರೂ ಎರಡು– ಮೂರು ತಿಂಗಳಲ್ಲಿ ಒಣಗಿ ಹೋಗುತ್ತಿರುವುದನ್ನು ಕಂಡು ಹೆದರಿರುವ ರೈತರು ತೋಟಗಳನ್ನು ಉಳಿಸಿಕೊಳ್ಳಲಾಗದೆ ಕೈ ಚೆಲ್ಲಿ ಕುಳಿತಿದ್ದಾರೆ.

ಶಿರಾ ತಾಲ್ಲೂಕಿಗಿಂತಲೂ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕುಗಳ ಪರಿಸ್ಥಿತಿ ಭೀಕರವಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ, ಮತ್ತಿಘಟ್ಟ, ಬೇವಿನಹಳ್ಳಿ– ಕುಪ್ಪೂರು ರಸ್ತೆಯುದ್ದಕ್ಕೂ ಒಣಗಿದ ತೋಟಗಳನ್ನು ನೋಡಿದವರಿಗೆ ಕರುಳು ಹಿಂಡುತ್ತದೆ.

ADVERTISEMENT

ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ, ಮಾಯಸಂದ್ರ ಹೋಬಳಿಗಳಲ್ಲೂ ಏನೂ ಉಳಿದಿಲ್ಲ.  ದಂಡಿನಶಿವರ ಹೋಬಳಿಯ ಚಾಕೋಳಿಪಾಳ್ಯ, ನೀರಗುಂದ ಅಜ್ಜೇನಹಳ್ಳಿ, ಚಾಕೇನಹಳ್ಳಿ, ಹೊಳೆಗೇರಹಳ್ಳಿ, ಬಾಣಸಂದ್ರ ಸುತ್ತಮುತ್ತಲ ಭಾಗಗಳಲ್ಲಿನ ತೋಟಗಳ ಕಥೆಯೂ ಭಿನ್ನವಾಗಿಲ್ಲ.
‘ನನಗೀಗ 85 ವರ್ಷವಾಗಿರಬಹುದು. ನನ್ನ ಜೀವನದಲ್ಲಿ ಇಂಥ ಬರ ನೋಡಿಲ್ಲ. ಬುದ್ಧಿ ಕಂಡಾಗಿನಿಂದ ತೆಂಗು ಈ ಪಾಟಿ ಒಣಗಿದ್ದನ್ನು ಕಂಡಿಲ್ಲ’ ಎಂದು ಹರಿದಾಸನಹಳ್ಳಿಯ ಗಂಗಣ್ಣ ತಿಳಿಸಿದರು.

ತಿಪಟೂರಿನಲ್ಲಿ ಅತಿ ಹೆಚ್ಚು ಹಾನಿ: ಕೊಬ್ಬರಿಗೆ ತಿಪಟೂರು ಹೆಸರುವಾಸಿ. ಈ ತಾಲ್ಲೂಕಿನಲ್ಲಿ ಮಳೆಯಾಶ್ರಯದಲ್ಲಿ ಅತಿ ಹೆಚ್ಚಾಗಿ ತೆಂಗು ಬೆಳೆಯುಲಾಗುತ್ತಿದೆ. ಹೀಗಾಗಿ ಇಲ್ಲಿ ಅತಿ ಹೆಚ್ಚು ಪ್ರಮಾಣದ ಹಾನಿಯಾಗಿದೆ.

ತಾಲ್ಲೂಕಿನ ಗೌಡನಕಟ್ಟೆ, ಗುರುಗದಹಳ್ಳಿ, ಚಿಕ್ಕಬಿದರೆ, ಶಿವರ, ಬೆಣ್ಣೇನಹಳ್ಳಿ, ಸಣ್ಣೇನಹಳ್ಳಿ ರಸ್ತೆಯುದ್ದಕ್ಕೂ ತೆಂಗು ಸುಳಿ ಕಳಚಿ ನಿಂತಿವೆ.  ಹೇಮಾವತಿ ನಾಲೆಯ ನೀರಿನ ಲಭ್ಯತೆ ಇರುವ ನೊಣವಿನಕೆರೆ ಹೋಬಳಿಯ ಅರ್ಧಭಾಗ ಬಿಟ್ಟು ತಾಲ್ಲೂಕಿನ ಬಹುತೇಕ ಹೋಬಳಿಗಳಲ್ಲಿ ಬರದ ತೀವ್ರತೆ ಕಣ್ಣಿಗೆ ರಾಚುತ್ತದೆ. ತೆಂಗಿನ ಮರಗಳು ಒಣಗಿ ನೆಲಕ್ಕುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.