ADVERTISEMENT

ನಮ್ಮ ಮೆಟ್ರೊದಲ್ಲಿ ಹಿಂದಿ ಬೇಕೆಂದು ಸದಾನಂದ ಗೌಡ ಪಟ್ಟು

ಏಜೆನ್ಸೀಸ್
Published 7 ಜುಲೈ 2017, 9:40 IST
Last Updated 7 ಜುಲೈ 2017, 9:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ ಹಿಂದಿ ಬೇಡ’ ಅಭಿಯಾನ ತೀವ್ರಗೊಳ್ಳುತ್ತಿರುವ ನಡುವೆಯೇ ಮೆಟ್ರೊದಲ್ಲಿ ಹಿಂದಿ ಭಾಷೆ ಬೇಕೆಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾನುಷ್ಠಾನ ಸಚಿವ ಸದಾನಂದ ಗೌಡ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಹಿಂದಿ ಬಳಕೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಗುರುವಾರ ನಡೆಸಿದ್ದ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.

ಸದಾನಂದ ಗೌಡ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಂಸದ ಪಿ.ಸಿ. ಮೋಹನ್ ಹಾಗೂ ಇತರ ಸರ್ಕಾರಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸದಾನಂದ ಗೌಡ ಅವರು ಹಿಂದಿ ಬೇಕೆಂದು ಪಟ್ಟು ಹಿಡಿದರೆ, ಜಾರ್ಜ್ ಅವರು ಹಿಂದಿ ಬೇಡ ಎಂದು ವಾದಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ADVERTISEMENT

‘ನಮ್ಮ ಮೆಟ್ರೊದಲ್ಲಿ ಮೂರು ಭಾಷಾ ನೀತಿ ಅಳವಡಿಸಬೇಕೆಂದು ಕೇಂದ್ರ ಸಚಿವನಾಗಿ ನಾನು ಹೇಳುತ್ತಿದ್ದೇನೆ. ಕನ್ನಡಕ್ಕೆ ಆದ್ಯತೆ ನೀಡಬೇಕು. ಹಿಂದಿಯನ್ನು ಬಹಳಷ್ಟು ರಾಜ್ಯಗಳಲ್ಲಿ ಮಾತನಾಡಲಾಗುತ್ತಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ನಗರವಾಗಿರುವುದರಿಂದ ಆಂಗ್ಲ ಭಾಷೆಯೂ ಬೇಕು. ವಿಶ್ವದ ವಿವಿಧೆಡೆಯಿಂದ ಬರುವ ಜನರಿಗೆ ಅರ್ಥವಾಗಲು ಇದು ಅಗತ್ಯ’ ಎಂದು ಸದಾನಂದ ಗೌಡ ಹೇಳಿದ್ದಾರೆ.

ಮಾಧ್ಯಮಗಳ ವಿರುದ್ಧ ಆರೋಪ: ಸಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ನಮ್ಮ ಮೆಟ್ರೊ ಹಿಂದಿ ಬೇಡ’ ಅಭಿಯಾನ ಗೊಂದಲಮಯವಾಗಿದೆ. ಇದು ಮಾಧ್ಯಮ ಪ್ರಚೋದಿತ ಎಂದು ಸದಾನಂದ ಗೌಡ ಅವರು ಆರೋಪಿಸಿದ್ದಾರೆ.

ಆದರೆ, ಜಾರ್ಜ್ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ನಿಲುವು ಹಿಂದಿ ವಿರುದ್ಧವಾದದ್ದು ಎಂದು ಹೇಳಿದ್ದಾರೆ. ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದೇ ನಿಲುವು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಮೆಟ್ರೊ ನಿಲ್ದಾಣಗಳಲ್ಲಿ ಸಂದೇಶಗಳನ್ನು ಪ್ರಕಟಿಸುವ ವಿಚಾರವಾಗಿ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ಪಿ.ಸಿ. ಮೋಹನ್ ಆಗ್ರಹಿಸಿದ್ದಾರೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.