ADVERTISEMENT

ನರೇಶ್‌ ಶೆಣೈ ಮೂರು ದಿನ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 16:04 IST
Last Updated 27 ಜೂನ್ 2016, 16:04 IST
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈಯನ್ನು ಮಂಗಳೂರು ನಗರ ಪೊಲೀಸರು ಸೋಮವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದ ಸಂದರ್ಭ. –ಪ್ರಜಾವಾಣಿ ಚಿತ್ರ
ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈಯನ್ನು ಮಂಗಳೂರು ನಗರ ಪೊಲೀಸರು ಸೋಮವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದ ಸಂದರ್ಭ. –ಪ್ರಜಾವಾಣಿ ಚಿತ್ರ   

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಮೋ ಬ್ರಿಗೇಡ್ ಮುಖಂಡ ನರೇಶ್‌ ಶೆಣೈಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ ನರೇಶ್‌ ಶೆಣೈಯನ್ನು ಭಾನುವಾರ ಮಧ್ಯಾಹ್ನ ಉಡುಪಿ ಜಿಲ್ಲೆ ಹೆಜಮಾಡಿ ಬಳಿ ಬಂಧಿಸಲಾಗಿತ್ತು. ಬಾಳಿಗ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ತಿಲಕ್‌ಚಂದ್ರ ನೇತೃತ್ವದ ತಂಡ ಸೋಮವಾರ ಬೆಳಿಗ್ಗೆ 11.30ರ ಸುಮಾರಿಗೆ ಆರೋಪಿಯನ್ನು ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಬೇಕಿರುವುದರಿಂದ ಆರೋಪಿಯನ್ನು ಒಂದು ವಾರಗಳ ಕಾಲ ವಶಕ್ಕೆ ನೀಡುವಂತೆ ಮನವಿಯನ್ನೂ ಸಲ್ಲಿಸಿತು.

ಪ್ರಕರಣದ ಈವರೆಗಿನ ತನಿಖೆಯ ವಿವರಗಳನ್ನು ನ್ಯಾಯಾಲಯದ ಮುಂದಿರಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್, ‘ನರೇಶ್‌ ಶೆಣೈ ಈ ಕೊಲೆಯ ಸಂಚುಗಾರ ಮತ್ತು ರೂವಾರಿ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ವಿನಾಯಕ ಬಾಳಿಗ ಅವರ ಕೊಲೆ ನಡೆದ ದಿನದಿಂದಲೂ ತಲೆಮರೆಸಿಕೊಂಡಿದ್ದ ಈತನನ್ನು ಭಾನುವಾರವಷ್ಟೇ ಬಂಧಿಸಲಾಗಿದೆ. ಕೊಲೆ ಮತ್ತು ನಂತರದ ಬೆಳವಣಿಗೆಗಳ ಕುರಿತು ಆರೋಪಿಯನ್ನು ಪ್ರಶ್ನಿಸಬೇಕಿದೆ. ಆದ್ದರಿಂದ ಒಂದು ವಾರಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಬೇಕು’ ಎಂದು ಕೋರಿದರು.

ಈ ಮಧ್ಯೆ ಅರ್ಜಿಯೊಂದನ್ನು ಸಲ್ಲಿಸಿದ ನರೇಶ್ ಶೆಣೈ ಪರ ವಕೀಲರು, ತಮ್ಮ ಕಕ್ಷಿದಾರನಿಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದು, ಚಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್, ‘ಆರೋಪಿಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಇಲ್ಲ. ಸೋಮವಾರ ಬೆಳಿಗ್ಗೆ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದರು.

ಪೊಲೀಸರು ಮತ್ತು ಆರೋಪಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು, ಆರೋಪಿಯನ್ನು ಮೂರು ದಿನಗಳ ಕಾಲ ತನಿಖಾ ತಂಡದ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದರು. ನರೇಶ್‌ ಶೆಣೈಗೆ ಆಸ್ಪತ್ರೆಗೆ ದಾಖಲಾಗಲು ಅನುಮತಿ ನೀಡಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಯಾವುದೇ ತೀರ್ಮಾನವನ್ನೂ ಪ್ರಕಟಿಸಲಿಲ್ಲ.

ಶ್ರೀಕಾಂತ್‌ ವಶಕ್ಕೆ ಮನವಿ: ಪ್ರತ್ಯೇಕ ಅರ್ಜಿಯೊಂದನ್ನು ಸಲ್ಲಿಸಿದ ಪೊಲೀಸರು, ಪ್ರಕರಣದ ಎರಡನೇ ಆರೋಪಿ ಮತ್ತು ನರೇಶ್‌ ಶೆಣೈ ಆಪ್ತ ಶ್ರೀಕಾಂತ್‌ನನ್ನು ಪುನಃ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ವಿನಾಯಕ ಬಾಳಿಗರ ಕೊಲೆಗೆ ಸಂಚು ರೂಪಿಸಿರುವುದು ಮತ್ತು ಅದನ್ನು ಕಾರ್ಯರೂಪಕ್ಕೆ ತಂದಿರುವುದರ ಕುರಿತು ಇಬ್ಬರನ್ನೂ ಒಟ್ಟಿಗೆ ಪ್ರಶ್ನಿಸಬೇಕಿದೆ. ಈ ಕಾರಣಕ್ಕಾಗಿ ಆತನನ್ನು ತನಿಖಾ ತಂಡದ ವಶಕ್ಕೆ ನೀಡಬೇಕು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್ ವಾದಿಸಿದರು.

ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಕಾಂತ್ ಪರ ವಕೀಲರು, ‘ಎರಡನೇ ಆರೋಪಿಯನ್ನು ವಿಚಾರಣೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಪುನಃ ಪ್ರಶ್ನಿಸುವ ಅಗತ್ಯ ಉಳಿದಿಲ್ಲ. ಈ ಕಾರಣದಿಂದ ಶ್ರೀಕಾಂತ್‌ನನ್ನು ಪೊಲೀಸರ ವಶಕ್ಕೆ ನೀಡಬಾರದು’ ಎಂದು ವಾದಿಸಿದರು. ಈ ಅರ್ಜಿಯ ಬಗ್ಗೆಯೂ ನ್ಯಾಯಾಧೀಶರು ಯಾವುದೇ ಆದೇಶ ಹೊರಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.