ADVERTISEMENT

ನವಲಗುಂದ ಬಂದ್ ಸಂಪೂರ್ಣ ಯಶಸ್ವಿ

ನಿರಂತರ ಧರಣಿ 300ನೇ ದಿನಕ್ಕೆ; ಬೇಡಿಕೆ ಈಡೇರಿಕೆಗೆ ಜುಲೈ 21 ಗಡುವು 

​ಪ್ರಜಾವಾಣಿ ವಾರ್ತೆ
Published 28 ಮೇ 2016, 20:02 IST
Last Updated 28 ಮೇ 2016, 20:02 IST
ಕಳಸಾ-ಬಂಡೂರಿ ಹೋರಾಟದ ಅಂಗವಾಗಿ ಶನಿವಾರ ನವಲಗುಂದದಲ್ಲಿ ಏರ್ಪಡಿಸಿದ್ದ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತರು
ಕಳಸಾ-ಬಂಡೂರಿ ಹೋರಾಟದ ಅಂಗವಾಗಿ ಶನಿವಾರ ನವಲಗುಂದದಲ್ಲಿ ಏರ್ಪಡಿಸಿದ್ದ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತರು   

ನವಲಗುಂದ (ಧಾರವಾಡ): ಕಳಸಾ–ಬಂಡೂರಿ ಹಾಗೂ ಮಹಾದಾಯಿ ಯೋಜನೆ ಜಾರಿಗಾಗಿ ಆಗ್ರಹಿಸಿ ರೈತ ಒಕ್ಕೂಟದಿಂದ ಇಲ್ಲಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಶನಿವಾರ 300ನೇ ದಿನಕ್ಕೆ ಕಾಲಿಟ್ಟಿದ್ದರಿಂದ ಕರೆ ನೀಡಿದ್ದ ನವಲಗುಂದ ಬಂದ್ ಸಂಪೂರ್ಣ ಯಶಸ್ವಿಯಾಯಿತು. 

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಸುಮಾರು 12 ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಪದವಿ ಪರೀಕ್ಷೆಗೆ ತೆರಳಬೇಕಿದ್ದ ವಿದ್ಯಾರ್ಥಿಗಳಿಗೂ ಬಂದ್ ಬಿಸಿ ತಟ್ಟಿತು.

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮುಳ್ಳು ಕಂಟಿಗಳನ್ನು ಹಾಕಿದ್ದರಿಂದ ಬಂದೋಬಸ್ತಿಗೆ ಬರಬೇಕಿದ್ದ ಪೊಲೀಸರಿಗೂ ದಾರಿ ಇಲ್ಲದಂತಾಯಿತು. ಇದರಿಂದ ಪೊಲೀಸರು ರೈತರೊಂದಿಗೆ ವಾಗ್ವಾದಕ್ಕಿಳಿದರು. ವರ್ತಕರು ಅಂಗಡಿ–ಮುಂಗಟ್ಟುಗಳನ್ನು ಸ್ವಯಂ ಮುಚ್ಚಿ ರೈತರಿಗೆ ಬೆಂಬಲ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. 

ಜುಲೈ 21ಕ್ಕೆ ಗಡುವು: ರೈತ ಜಾಗೃತಿ ಸಮಾವೇಶದಲ್ಲಿ ಹಲವು ಸುತ್ತಿನ ಮಾತುಕತೆ ನಡೆದು, ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ರೈತ ಹುತಾತ್ಮ ದಿನಾಚರಣೆ ಜುಲೈ 21 ರವರೆಗೆ ಗಡುವು ನೀಡಲಾಯಿತು.

ಅಂದು ರೈತರ ಬೇಡಿಕೆ ಈಡೇರದಿದ್ದರೆ ಮತ್ತೊಂದು ಬಂಡಾಯ ಮಾಡುವುದಾಗಿ ರೈತರು ಶಪಥ ಕೈಗೊಂಡರು. ಅಲ್ಲದೇ  ರಾಜ್ಯದಿಂದ ಗೋವಾಕ್ಕೆ ಸರಬರಾಜು ಮಾಡುವ ಆಹಾರ ಧಾನ್ಯ ಹಾಗೂ ಅವಶ್ಯಕ ವಸ್ತುಗಳನ್ನು ಬಂದ್ ಮಾಡಿ ಉಗ್ರ ಹೋರಾಟ ಮಾಡಲು ನಿರ್ಧರಿಸಿದರು.  

ಪೂಜಾ ಗಾಂಧಿಗೆ ಕಾದು ಸುಸ್ತಾದರು
ಜಾಗೃತಿ ಸಮಾವೇಶಕ್ಕೆ ಚಿತ್ರನಟಿ ಪೂಜಾ ಗಾಂಧಿ ಬರಲಿದ್ದಾರೆಂದು ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಆದರೆ, ಅವರು ಸಂಜೆ 4 ಗಂಟೆಯಾದರೂ ಬರಲಿಲ್ಲ. ನೆರೆದಿದ್ದ ರೈತರು, ಮಹಿಳೆಯರು ಪೂಜಾ ಗಾಂಧಿ ಅವರಿಗಾಗಿ ಕಾದು ಸುಸ್ತಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.