ADVERTISEMENT

ನಾಳೆಯಿಂದ ಯುವ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:46 IST
Last Updated 16 ಮಾರ್ಚ್ 2017, 19:46 IST
ಎಂ.ಎಲ್‌.ವೈಶಾಲಿ
ಎಂ.ಎಲ್‌.ವೈಶಾಲಿ   

ಚಿಕ್ಕಮಗಳೂರು: ರಾಜ್ಯ ಯುವ ಸಮ್ಮೇಳನ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ ಇದೇ 18ರಿಂದ 29ರವರೆಗೆ ಮೂರು ದಿನಗಳ ಕಾಲ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆಯಲಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 1 ಸಾವಿರ ಯುವ ಪ್ರತಿಭೆಗಳು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲಾಡಳಿತ ಯುವ ಸಮ್ಮೇಳನಕ್ಕಾಗಿ ಸಕಲ ಸಿದ್ಧತೆ ನಡೆಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

*
ಆರ್‌ಟಿಪಿಎಸ್: ಕಲ್ಲಿದ್ದಲು ಕೊರತೆ
ಶಕ್ತಿನಗರ:
ಇಲ್ಲಿನ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್‌ಟಿಪಿಎಸ್) ಗಣಿಗಳಿಂದ ಸರ್ಮಪಕವಾಗಿ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಇದರಿಂದ ಕಲ್ಲಿದ್ದಲು  ಸಂಗ್ರಹ ಕುಸಿದಿದೆ.

ಸದ್ಯ 60 ಸಾವಿರ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ಕನಿಷ್ಠ ಒಂದು ಲಕ್ಷ ಟನ್‌ನಷ್ಟು ಅಗತ್ಯವಿದೆ. ಸಿಂಗರೇಣಿ, ಮಹಾನದಿ ಕೋಲ್‌ಫೀಲ್ಡ್, ವೆಸ್ಟರ್ನ್‌ ಕೋಲ್‌ಫೀಲ್ಡ್  ಕಂಪೆನಿಗಳಿಂದ ಆರ್‌ಟಿಪಿಎಸ್‌ಗೆ ಪ್ರತಿದಿನ ಕನಿಷ್ಠ 8 ಕಲ್ಲಿದ್ದಲು ರೇಕ್‌ಗಳು (ಒಂದು ರೇಕ್ –59 ಬೋಗಿಗಳಿರುವ ಸರಕು ಸಾಗಣೆ ರೈಲು) ಬರಬೇಕಿತ್ತು.

ADVERTISEMENT

ಆದರೆ, ನಾಲ್ಕು ದಿನಗಳಿಂದ ವಿವಿಧ ಗಣಿಗಳಿಂದ ಕಡಿಮೆ ರೇಕ್‌ಗಳು ಬರುತ್ತಿರುವುದು ಕುಸಿತಕ್ಕೆ ಕಾರಣವಾಗಿದೆ. ಆರ್‌ಟಿಪಿಎಸ್ ಎಂಟು ಘಟಕಗಳಿಗೆ ನಿತ್ಯ 30 ಸಾವಿರ  ಟನ್ ಕಲ್ಲಿದ್ದಲು ಅಗತ್ಯವಿದೆ.

*
ಹಸಿವಿನಿಂದ ಬಳಲಿ ಹೆಣ್ಣಾನೆ ಸಾವು
ಹನೂರು (ಚಾಮರಾಜನಗರ ಜಿಲ್ಲೆ):
ಕಾವೇರಿ ವನ್ಯಜೀವಿಧಾಮದಲ್ಲಿ 30 ವರ್ಷ ಪ್ರಾಯದ ಹೆಣ್ಣಾನೆಯೊಂದು ಗುರುವಾರ ಹಸಿವಿನಿಂದ ಬಳಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಕೌದಳ್ಳಿ ವನ್ಯಜೀವಿ ವಲಯದ ಚೆನ್ನೂರು ಬೀಟ್‌ನಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ಬೆಳಿಗ್ಗೆ ಅರಣ್ಯ ವೀಕ್ಷಕರು ಗಸ್ತಿಗೆ ತೆರಳಿದ್ದ ವೇಳೆ ಆನೆ ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ, ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

*
ಹೊಸ್ಕೆರೆ: ಒಂಟಿ ಸಲಗ ಸೆರೆ
ಮೂಡಿಗೆರೆ:
ತಾಲ್ಲೂಕಿನಲ್ಲಿ ಕಳೆದ ಎಂಟು ವರ್ಷಗಳಿಂದ ದಾಂದಲೆ ನಡೆಸುತ್ತಿದ್ದ ಒಂಟಿ ಸಲಗವನ್ನು ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸಾಕಾನೆಗಳ ನೆರವಿನಿಂದ ಹೊಸ್ಕೆರೆ ಗ್ರಾಮದ ಏರಿಕೆ ಎಂಬಲ್ಲಿ ಸೆರೆ ಹಿಡಿದಿದ್ದಾರೆ. ಒಂಟಿ ಸಲಗವನ್ನು ಸೆರೆ ಹಿಡಿಯಲು ಭೈರಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯು ಆನೆ ಶಿಬಿರವನ್ನು ಹಾಕಿದ್ದು, ನಾಗರಹೊಳೆ ಆನೆ ಶಿಬಿರದಿಂದ 5 ಸಾಕಾನೆಗಳನ್ನು ತಂದು ಗುರುವಾರ ಮುಂಜಾನೆಯಿಂದ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

*
ಎಚ್‌1ಎನ್‌1ಗೆ ಬಲಿ 
ಚಿಕ್ಕಬಳ್ಳಾಪುರ:
ಎಚ್‌1ಎನ್‌1 ಸೋಂಕಿಗೆ ತುತ್ತಾಗಿದ್ದ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದ ನಿವಾಸಿ ಮುನಿಕೃಷ್ಣ (45) ಎಂಬುವರು ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

‘ಮುನಿಕೃಷ್ಣ ಅವರು ಮಾ. 8 ರಂದು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಅವರಲ್ಲಿ ಎಚ್‌1ಎನ್‌1 ಸೋಂಕು ಇರುವುದಾಗಿ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವಂತೆ ಸಲಹೆ ನೀಡಿದ್ದರು. ಅದರಂತೆ ಅವರು ಮಾ.  9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ತಿಳಿಸಿದರು.

ಎಚ್‌1ಎನ್‌1 ಸೋಂಕಿನಿಂದ ಬಳಲುತ್ತಿದ್ದ ತಾಲ್ಲೂಕಿನ ಕಮ್ಮಗಾನಹಳ್ಳಿ ನಿವಾಸಿ ಮಮತಾ ಲಕ್ಷ್ಮಿಪತಿ (35) ಎಂಬುವವರು ಕೂಡ ಜನವರಿ 9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

*
ಕ್ರಷರ್‌ನಲ್ಲಿ ಸಿಲುಕಿ ಮಹಿಳೆ ಸಾವು
ತರೀಕೆರೆ:
ಪಟ್ಟಣದ ಸಮೀಪದಲ್ಲಿನ ಬೇಲೆನಹಳ್ಳಿ ಗ್ರಾಮದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ರಷರ್‌ನಲ್ಲಿ ಕಾರ್ಮಿಕ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ.
ಗಂಟೆಕಣಿವೆ ವಾಸಿ ಶಾಂತಮ್ಮ (33) ಮೃತಪಟ್ಟವರು. ಕೆಲಸ ಮಾಡುತ್ತಿದ್ದಾಗ ಶಾಂತಮ್ಮ ಮೆಷಿನ್‌ ಬೆಲ್ಟ್‌ಗೆ ಸೀರೆ ಸಿಲುಕಿ ಮೃತಪಟ್ಟಿದ್ದಾರೆ. ಕ್ರಷರ್ ಮಾಲೀಕ ಶ್ರೀನಿವಾಸ್ ವಿರುದ್ಧ  ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.