ADVERTISEMENT

ನಿರ್ವಹಣಾ ಮಂಡಳಿಯಿಂದ ಬೆಳೆ ಮೇಲೂ ಕಣ್ಗಾವಲು

ಹೆಚ್ಚುವರಿ ನೀರು ಬಳಕೆಗೆ ಬೀಳಲಿದೆ ಕಡಿವಾಣ, ಜಲಾಶಯಗಳ ಗೇಟಿನ ಬೀಗದ ಕೈ ಮಂಡಳಿ ವಶಕ್ಕೆ

ವೈ.ಗ.ಜಗದೀಶ್‌
Published 22 ಸೆಪ್ಟೆಂಬರ್ 2016, 19:30 IST
Last Updated 22 ಸೆಪ್ಟೆಂಬರ್ 2016, 19:30 IST
ನಿರ್ವಹಣಾ ಮಂಡಳಿಯಿಂದ ಬೆಳೆ ಮೇಲೂ ಕಣ್ಗಾವಲು
ನಿರ್ವಹಣಾ ಮಂಡಳಿಯಿಂದ ಬೆಳೆ ಮೇಲೂ ಕಣ್ಗಾವಲು   

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶದ ಅನ್ವಯ  ನೀರು ನಿರ್ವಹಣಾ ಮಂಡಳಿ ಅಸ್ತಿತ್ವಕ್ಕೆ ಬಂದರೆ ಕಾವೇರಿ ನದಿ ಪಾತ್ರದಲ್ಲಿನ ಕೃಷಿ ವಿಸ್ತರಣಾ ಚಟುವಟಿಕೆ, ಹೆಚ್ಚುವರಿ ನೀರು ಬಳಕೆಗೆ ಕಡಿವಾಣ ಬೀಳುವ ಆತಂಕ ವ್ಯಕ್ತವಾಗಿದೆ.

ಕಾವೇರಿ ನ್ಯಾಯ ಮಂಡಳಿ   2007ರಲ್ಲಿ ನೀಡಿದ ಐತೀರ್ಪಿನಲ್ಲಿ   ಕರ್ನಾಟಕ, ತಮಿಳುನಾಡು,  ಕೇರಳ ಮತ್ತು ಪುದುಚೇರಿ ರಾಜ್ಯಗಳಿಗೆ ಹಂಚಿಕೆ ಮಾಡಲಾದ ನೀರನ್ನು ಯಾವ  ಬೆಳೆಗಳಿಗೆ ಎಷ್ಟು ಬಳಸಲಾಗುತ್ತಿದೆ ಎಂಬ ಬಗ್ಗೆ  ಕಣ್ಗಾವಲು ಇಡುವ ಅಧಿಕಾರ ಈ ಮಂಡಳಿಗೆ ಸಿಗಲಿದೆ.

ಆಯಾ ಜಲವರ್ಷದಲ್ಲಿ   ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಕಾವೇರಿ ಕಣಿವೆಯ ರಾಜ್ಯಗಳು  ಇಂತಿಷ್ಟೇ  ಬಿತ್ತನೆ ಮಾಡಬೇಕು ಎಂದು ಐತೀರ್ಪು ಹೇಳಿತ್ತು. ಇದನ್ನು ಜಾರಿಮಾಡಲು ಮಂಡಳಿ  ಮುಂದಾದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಐತೀರ್ಪಿಗೆ ಮುನ್ನ ನ್ಯಾಯಮಂಡಳಿಗೆ ಸಲ್ಲಿಸಿದ ದಾಖಲೆಗಿಂತ ಎಲ್ಲಾ ರಾಜ್ಯಗಳೂ ವಾಸ್ತವವಾಗಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ  ಬೆಳೆಯುತ್ತಿವೆ. ನಿರ್ವಹಣಾ ಮಂಡಳಿ ರಚನೆಯಾದ  ಬಳಿಕ ಐತೀರ್ಪಿನಲ್ಲಿ ನಿಗದಿಪಡಿಸಿದ ಬೆಳೆಗಿಂತ ಹೆಚ್ಚಿನ ಬೆಳೆ ತೆಗೆಯಲು ಅವಕಾಶ ಇರುವುದಿಲ್ಲ. ಒಂದು ವೇಳೆ ಐತೀರ್ಪು ಉಲ್ಲಂಘಿಸಿ ಬೆಳೆದರೆ ನೀರು ಪೂರೈಸದೇ ಇರುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುವ ಅಧಿಕಾರ ಮಂಡಳಿಗೆ ಇರುತ್ತದೆ.

ಐತೀರ್ಪು ನಿಗದಿಪಡಿಸಿದ ನೀರಿಗಿಂತ ಹೆಚ್ಚುವರಿ ನೀರು ಬಳಸುವುದು ಪತ್ತೆಯಾದರೆ, ಅದಕ್ಕೆ ನಿರ್ಬಂಧ ವಿಧಿಸಿ, ಇತರೆ ಆಶ್ರಿತ ರಾಜ್ಯಗಳಿಗೆ ನೀರು ಬಿಡಿಸುವ ಅಧಿಕಾರವೂ ಮಂಡಳಿಗೆ ಸಿಗಲಿದೆ.

ನೀರು ಬಳಕೆಗೆ ಕಡಿವಾಣ: ಐತೀರ್ಪಿನ ಅನುಸಾರ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಬಳಸುವ ಅಧಿಕಾರ ಇದೆ. ಈ ಪೈಕಿ ಪ್ರತಿ ಜಲಾಶಯಕ್ಕೆ ಇಂತಿಷ್ಟು ನೀರು ಎಂದು ಹಂಚಿಕೆ ಮಾಡಲಾಗಿದೆ. ಇದಲ್ಲದೇ ಸಣ್ಣ ನೀರಾವರಿ ಯೋಜನೆಯ ಕೆರೆಗಳಿಗೆ ವಾರ್ಷಿಕ 63.83 ಟಿಎಂಸಿ ಅಡಿ ನೀರು ಮೀಸಲಿಟ್ಟಿದೆ. ಇಲ್ಲಿಯವರೆಗಿನ ಪದ್ಧತಿಯಲ್ಲಿ  ಇಷ್ಟು ನೀರನ್ನು ಸಂಬಂಧಿಸಿದ ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಕರ್ನಾಟಕ ಸರ್ಕಾರ, ಮಳೆಗಾಲ ಹಾಗೂ ನೀರಿನ ಕೊರತೆ ಆಧರಿಸಿ ಇದನ್ನೂ ಬಳಸಿಕೊಳ್ಳುತ್ತಿತ್ತು. ಐತೀರ್ಪು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ನೀರಿನ ಸಂಗ್ರಹ ಸಾಮರ್ಥ್ಯ ಜಲಾಶಯಗಳಿಗೆ ಇದೆ.

ಹೀಗಾಗಿ   ಮಳೆಗಾಲದಲ್ಲಿ  ನೀರು ಸಂಗ್ರಹಿಸಿ ಅವಶ್ಯವಿದ್ದಾಗ ಬಳಸುವ ಪದ್ಧತಿಯೂ ಚಾಲ್ತಿಯಲ್ಲಿತ್ತು. ಆದರೆ, ನಿರ್ವಹಣಾ ಮಂಡಳಿ ರಚನೆಯಾದ ಬಳಿಕ ಈ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಅವಕಾಶ ಇರುವುದಿಲ್ಲ. ಸಣ್ಣ ನೀರಾವರಿ ಕೆರೆಗಳು, ಚೆಕ್‌ ಡ್ಯಾಂಗಳಲ್ಲಿ ಸಂಗ್ರಹಿಸಿಕೊಟ್ಟುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

‘ಸಣ್ಣ ನೀರಾವರಿ ಕೆರೆಗಳು, ಕಿರುಜಲಾಶಯಗಳಲ್ಲಿ ಹೂಳು ತುಂಬಿರುವುದರಿಂದಾಗಿ 63.83 ಟಿಎಂಸಿ ಅಡಿ ಸಂಗ್ರಹಿಸುವ ಸಾಮರ್ಥ್ಯವಿಲ್ಲ. ಕಣ್ವ ಅಣೆಕಟ್ಟಿಗೆ 0.42 ಟಿಎಂಸಿ ಅಡಿ, ಮಂಚನ ಬೆಲೆ ಜಲಾಶಯಕ್ಕೆ 0.62 ಟಿಎಂಸಿ ಅಡಿ, ನುಗು ಅಣೆಕಟ್ಟೆಗೆ 3.61 ಟಿಎಂಸಿ ಅಡಿ, ಸುವರ್ಣಾವತಿ ಜಲಾಶಯಕ್ಕೆ 2.39 ಟಿಎಂಸಿ ಅಡಿ, ತಾರಕ ಅಣೆಕಟ್ಟೆಯಲ್ಲಿ 1.13 ಟಿಎಂಸಿ ಅಡಿ ನೀರನ್ನು ಸಣ್ಣ ನೀರಾವರಿ ಯೋಜನೆಗಳಡಿ ಹಂಚಿಕೆ ಮಾಡಲಾಗಿದೆ. ಗುಂಡಾಳ್‌, ವಾಟೆಹೊಳೆ, ಚಿಕ್ಕಹೊಳೆ ಕಿರು ಜಲಾಶಯಗಳಿಗೆ ಹಂಚಿಕೆ ಮಾಡಿರುವ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲ. ಇದು ಸಮಸ್ಯೆಯಾಗಲಿದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ವಿಸ್ತರಣೆಗೆ ಅಡ್ಡಿ: ಮುಂಗಾರು ಹಂಗಾಮಿನಲ್ಲಿ 7.67 ಲಕ್ಷ ಎಕರೆಯಲ್ಲಿ ಮಾತ್ರ ಭತ್ತ ಬೆಳೆಯಬಹುದು. ಅಲ್ಲದೇ ಸಣ್ಣ ನೀರಾವರಿ ಕೆರೆಗಳ ನೀರನ್ನು ಆಶ್ರಯಿಸಿ 3.4 ಲಕ್ಷ ಎಕರೆ ಭತ್ತ ಬೆಳೆಯಬಹುದು. ಇದಕ್ಕಿಂತ ಹೆಚ್ಚಿಗೆ ಭತ್ತ ಬೆಳೆದರೆ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲಿ  40 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಕಬ್ಬು ಬೆಳೆಯಬಹುದು. ಉಳಿದ ಅಣೆಕಟ್ಟಿನ ವ್ಯಾಪ್ತಿಯಲ್ಲಿ ಬೆಳೆಯುವಂತಿಲ್ಲ ಎಂಬ  ನಿರ್ಬಂಧ ಇರುವುದು ಸಮಸ್ಯೆಯಾಗಿ ಕಾಡಲಿದೆ ಎಂದು ಮೂಲಗಳು ತಿಳಿಸಿವೆ.

ಬೇಸಿಗೆಯಲ್ಲಿ ಕಬ್ಬು ಮತ್ತು ಭತ್ತ ಬೆಳೆಯುವಂತಿಲ್ಲ. ಕೇವಲ ಅರೆ ನೀರಾವರಿ ಬೆಳೆಗಳಿಗೆ ಅವಕಾಶ ಇದೆ. ನೀರಿನ ಕೊರತೆ ಇದ್ದಾಗ ಎರಡನೇ ಬೆಳೆ ಬೆಳೆಯುವುದಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.