ADVERTISEMENT

ನಿಲ್ಲದ ಮಳೆ ಆರ್ಭಟ ಮುಂದುವರಿದ ಭೂ ಕುಸಿತ

ಮಂಗಳೂರು ರೈಲು ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ನಿಲ್ಲದ ಮಳೆ ಆರ್ಭಟ ಮುಂದುವರಿದ ಭೂ ಕುಸಿತ
ನಿಲ್ಲದ ಮಳೆ ಆರ್ಭಟ ಮುಂದುವರಿದ ಭೂ ಕುಸಿತ   

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕಬಿನಿ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ನದಿಗೆ ನೀರು ಹರಿ ಬಿಡಲಾಗಿದೆ. ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

ಸುಬ್ರಹ್ಮಣ್ಯ–ಸಿರಿಬಾಗಿಲು ನಿಲ್ದಾಣಗಳ ಮಧ್ಯೆ ಭೂ ಕುಸಿತ ಉಂಟಾಗಿದ್ದರಿಂದ ಗುರುವಾರ ಮಂಗಳೂರು–ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ತುಂಗಾ ಹಾಗೂ ಭದ್ರಾ ನದಿ ಉಕ್ಕಿ ಹರಿಯುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿತ ತೆರವು ಕಾರ್ಯಾಚರಣೆ ಗುರುವಾರ ಸಂಜೆ ಮುಕ್ತಾಯ
ಗೊಂಡಿದ್ದು, ಲಘುವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆ ಬಸ್‌ ಸಂಚಾರ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಗುರುವಾರ ಮುಂಗಾರು ಮಳೆಯ ಅಬ್ಬರ ಕೊಂಚ ತಗ್ಗಿದ್ದರೂ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಭಾಗಮಂಡಲ ಜಲಾವೃತಗೊಂಡಿದೆ.

ಭಗಂಡೇಶ್ವರ ದೇವಸ್ಥಾನದ ಮೆಟ್ಟಿಲು ತನಕವೂ ನೀರು ನಿಂತಿದ್ದು ತಲಕಾವೇರಿ, ನಾಪೋಕ್ಲು, ಐಯ್ಯಂಗೇರಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.

ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ಸಮೀಪ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ನದಿಯಂಚಿನ ಕರಡಿಗೋಡು ಗ್ರಾಮದ ಜನರು ಆತಂಕದಲ್ಲಿದ್ದಾರೆ. ನದಿ ಅಂಚಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಕೋರಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, ಒಂದೇ ದಿನ ಎರಡು ಟಿಎಂಸಿ ಅಡಿಗಿಂತಲೂ ಅಧಿಕ ನೀರು ಹರಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.