ADVERTISEMENT

ಪಂಚಭೂತಗಳಲ್ಲಿ ಲೀನವಾದ ಜಿಎಸ್ಎಸ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2013, 14:03 IST
Last Updated 26 ಡಿಸೆಂಬರ್ 2013, 14:03 IST

ಬೆಂಗಳೂರು: ‘ರಾಷ್ಟ್ರಕವಿ’ ಡಾ.ಜಿ.ಎಸ್‌. ಶಿವರುದ್ರಪ್ಪ ಅವರ ಆಶಯದಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೆ ಜಿ.ಎಸ್‌.ಎಸ್‌. ಅವರ ಅಂತ್ಯಕ್ರಿಯೆ ಸರಳವಾಗಿ ಭಾವಪೂರ್ಣವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಗುರುವಾರ ಸಂಜೆ ನೆರವೇರಿತು.

ಜಿ.ಎಸ್‌.ಎಸ್‌. ಅವರು ಬನಶಂಕರಿಯಲ್ಲಿರುವ ನಿವಾಸ ‘ಚೈತ್ರ’ದಲ್ಲಿ ಸೋಮವಾರ ವಿಧಿವಶರಾಗಿದ್ದರು. ‘ನಾನು ಯಾವುದೇ ಜಾತಿಗೆ ಸೇರಿದವನು ಅಲ್ಲ. ಕರ್ನಾಟಕಕ್ಕೆ ಸೇರಿದವನು ಅಲ್ಲ. ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಬಾರದು’ ಎಂದು ಅವರು ಪತ್ರ ಬರೆದು ಇಟ್ಟಿದ್ದರು. ಅವರ ಆಶಯದ ಪ್ರಕಾರವೇ ಅಂತ್ಯಕ್ರಿಯೆ ನೆರವೇರಿತು.

ನಗರದ ನಾಲ್ಕು ಕಡೆಗಳಲ್ಲಿ ಸಾರ್ವಜನಿಕ ದರ್ಶನದ ಬಳಿಕ ಸಂಜೆ 4.30ರ ವೇಳೆಗೆ ಪಾರ್ಥಿವ ಶರೀರವನ್ನು ಕುವೆಂಪು ಭಾಷಾ ಭಾರತಿ ಹಿಂಭಾಗದಲ್ಲಿರುವ ಜಾಗಕ್ಕೆ ತರಲಾಯಿತು. ಚಿತೆಗೆ ಹಿರಿಯ ಪುತ್ರ ಜಿ.ಎಸ್‌. ಜಯದೇವ ಅಗ್ನಿಸ್ಪರ್ಶ ಮಾಡಿದರು.

ಈ ಸಂದರ್ಭದಲ್ಲಿ ಜಿಎಸ್‌ಎಸ್‌ ಅವರ ಪತ್ನಿಯರಾದ ರುದ್ರಾಣಿ, ಪದ್ಮಾ, ಮಗಳು ಜಯಂತಿ, ಅಳಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಕಿರಿಯ ಪುತ್ರ ಡಾ.ಶಿವಪ್ರಸಾದ್‌ ದಂಪತಿ, ಮೊಮ್ಮಗ ಕೆ.ಎಂ.ಚೈತನ್ಯ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು.

ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಹಾಗೂ ಹಿರಿಯ ಸಾಹಿತಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT