ADVERTISEMENT

ಪಂಚಾಯಿತಿ ಕಣದಲ್ಲಿ ಶತಾಯುಷಿ ಅಜ್ಜಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2015, 19:30 IST
Last Updated 5 ಜೂನ್ 2015, 19:30 IST

ಹನೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದ ಶತಾಯುಷಿ ಗೌತಮಮ್ಮ (102) ಶುಕ್ರವಾರ ನಡೆದ ಮತ ಎಣಿಕೆಯಲ್ಲಿ 136 ಮತಗಳ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಮರು ವಿಂಗಡಣೆಯಲ್ಲಿ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ದೊಡ್ಡಾಲತ್ತೂರು ಗ್ರಾಮ ಬೇರ್ಪಟ್ಟು ಪ್ರತ್ಯೇಕ ಗ್ರಾಮ ಪಂಚಾಯಿತಿ ಆಗಿತ್ತು. ಈ ಗ್ರಾಮ ಪಂಚಾಯಿತಿಗೆ ಕೆಂಪಯ್ಯನಹಟ್ಟಿ ಹಾಗೂ ದೊಡ್ಡಾಲತ್ತೂರು ಗ್ರಾಮಗಳು ಸೇರಿವೆ. 

ಒಟ್ಟು ಎಂಟು ಸ್ಥಾನಗಳಿದ್ದು, ದೊಡ್ಡಾಲತ್ತೂರು ಗ್ರಾಮದ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಗೌತಮಮ್ಮ ಹಾಗೂ ಚಿನ್ನಮ್ಮ ಸ್ಪರ್ಧಿಸಿದ್ದರು. ಶುಕ್ರವಾರ ಮತ ಎಣಿಕೆಯಲ್ಲಿ ಗೌತಮಮ್ಮ ಅವರಿಗೆ 354 ಹಾಗೂ ಪ್ರತಿಸ್ಪರ್ಧಿ ಚಿನ್ನಮ್ಮ ಅವರಿಗೆ 218 ಮತಗಳು ಬಂದವು.

ಗ್ರಾಮ ಪಂಚಾಯಿತಿಗೆ ಬರುವ ಅನುದಾನ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬ ದೃಷ್ಟಿಯಿಂದ ಗ್ರಾಮಸ್ಥರೇ ಅಜ್ಜಿಗೆ ನೈತಿಕ ಬೆಂಬಲ ನೀಡಿ ಚುನಾವಣೆಗೆ ಸ್ಪರ್ಧಿಸಲು ಪ್ರೇರೇಪಿಸಿದ್ದರು. ಯುವಕರು, ಮಹಿಳೆಯರೂ ಉತ್ತಮ ಸಾಥ್‌ ನೀಡಿ ಅಜ್ಜಿಯ ಪರ ಮತ ಯಾಚನೆ ಮಾಡಿದ್ದರು. ಅಜ್ಜಿಯೂ ಉತ್ಸಾಹದಿಂದಲೇ ಪ್ರಚಾರ ಮಾಡಿದ್ದರು. ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.