ADVERTISEMENT

ಪರಿಣಾಮ ಬೀರದ ಮುಷ್ಕರ

ಅಗತ್ಯ ವಸ್ತುಗಳ ಸಾಗಣೆಗೆ ತೊಂದರೆ ಇಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಬೆಂಗಳೂರು: ವಾರ್ಷಿಕ ಟೋಲ್ ಪಾವತಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ, ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್‌ ಕರೆ ನೀಡಿರುವ ಮುಷ್ಕರ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಪೆಟ್ರೋಲ್, ಡಿಸೇಲ್  ಸೇರಿದಂತೆ ಎಪಿಎಂಸಿ ಮಾರುಕಟ್ಟೆಗೆ ಬರುವ ಲಾರಿಗಳು ಮತ್ತು ಇತರ ಸರಕು ಸಾಗಣೆ ವಾಹನಗಳ ಓಡಾಟ ಎಲ್ಲೆಡೆ ಸಾಮಾನ್ಯವಾಗಿತ್ತು. ಹಾಗಾಗಿ, ಮುಷ್ಕರದ ಬಿಸಿ ಅಷ್ಟಾಗಿ ತಟ್ಟಿಲ್ಲ.

‘ಮುಷ್ಕರದಿಂದಾಗಿ ರಾಜ್ಯದಲ್ಲಿ ಸುಮಾರು ₹ 45 ಕೋಟಿ ನಷ್ಟವಾಗಿದೆ. ರಾಜ್ಯದ ಮೂಲಕ ನಿತ್ಯ ಹಾದು ಹೋಗುತ್ತಿದ್ದ ಹೊರ ರಾಜ್ಯಗಳ ಸುಮಾರು 40 ಸಾವಿರ ಲಾರಿಗಳ ಓಡಾಟದಲ್ಲಿ ವ್ಯತ್ಯಯವಾಗಿದೆ. ಅಲ್ಲದೆ, ಕೆಲವೆಡೆ ಡಿಸೇಲ್‌ ಪೂರೈಕೆಯಲ್ಲಿ ಏರುಪೇರು ಉಂಟಾಗಿದೆ ’ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೇ ತೊಂದರೆ ಇಲ್ಲ: ‘ಎಂದಿನಿಂತೆ ರಾಜ್ಯದ ವಿವಿಧ ಭಾಗಗಳಿಂದ ಈರುಳ್ಳಿ, ಆಲೂಗೆಡ್ಡೆ ಸೇರಿದಂತೆ ಇತರ ಸರಕುಗಳನ್ನು ಹೊತ್ತ ಸುಮಾರು 600 ವಾಹನಗಳು ಮಾರುಕಟ್ಟೆಗೆ ಬಂದಿವೆ. ಸ್ಥಳೀಯ  ಲಾರಿ ಮಾಲೀಕರು ಪಾಲ್ಗೊಳ್ಳದಿರುವುದರಿಂದ ಮಾರುಕಟ್ಟೆಯ ವ್ಯವಹಾರಕ್ಕೆ ಯಾವುದೇ ತೊಂದರೆಯಾಗಿಲ್ಲ’ ಎಂದು ಯಶವಂತಪುರ ಎಪಿಎಂಸಿ ಯಾರ್ಡ್‌ ವರ್ತಕರ ಸಂಘದ ಅಧ್ಯಕ್ಷ ಬಿ.ಎಲ್. ಶಂಕರಪ್ಪ ಹೇಳಿದರು.

ನಾವು ಭಾಗವಹಿಸಿಲ್ಲ:  ‘ಮುಷ್ಕರದಲ್ಲಿ ನಾವು ಪಾಲ್ಗೊಂಡಿಲ್ಲ. ಪೆಟ್ರೋಲ್ ಸರಬರಾಜು ಮಾಡುವ ವಾಹನಗಳ ಸಂಚಾರ ಸುಗಮವಾಗಿದ್ದು, ಎಲ್ಲೂ ತೊಂದರೆ ಕಂಡುಬಂದಿಲ್ಲ’ ಎಂದು ಪೆಟ್ರೋಲ್ ವಿತರಕರ ಸಂಘದ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.