ADVERTISEMENT

ಪಾನ್‌ಬ್ರೋಕರ್‌ ಸೋಗಿನಲ್ಲಿ ಆರೋಪಿಗಳ ಬಂಧನ

ನೋಟು ಬದಲಾವಣೆ ದಂಧೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:57 IST
Last Updated 23 ಮಾರ್ಚ್ 2017, 19:57 IST
ಅಜಯ್ - ರಾಹುಲ್
ಅಜಯ್ - ರಾಹುಲ್   

ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು (ಎನ್‌ಆರ್‌ಐ) ಬಳಸಿಕೊಂಡು ಹಳೇ ನೋಟುಗಳ ಬದಲಾವಣೆಗೆ ಮುಂದಾಗಿದ್ದ ಖಾಸಗಿ ಕಂಪೆನಿ ಲೆಕ್ಕಪರಿಶೋಧಕ ಜೆಮ್ನಿ ರಾಹುಲ್ (34) ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಅಜಯ್ (26) ಎಂಬುವವರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

‘ಆರೋಪಿಗಳು ಶೇಷಾದ್ರಿಪುರ ಸಮೀಪದ ಪೈಪ್‌ಲೈನ್ ರಸ್ತೆಯಲ್ಲಿರುವ ‘ಜೂಲ್ತಾ ಸೂರ್ಯ ಎಲೈಟ್ ಅಪಾರ್ಟ್‌ಮೆಂಟ್‌’ನಲ್ಲಿ ಕಚೇರಿ ಹೊಂದಿದ್ದರು. ಮಂಗಳವಾರ ರಾತ್ರಿ ಕಚೇರಿ ಮೇಲೆ ದಾಳಿ ನಡೆಸಿ ₹ 1.28 ಕೋಟಿ ಮೌಲ್ಯದ ಹಳೇ ನೋಟುಗಳು ಹಾಗೂ ಕಾರನ್ನು ಜಪ್ತಿ ಮಾಡಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋಣನಕುಂಟೆ ನಿವಾಸಿಯಾದ ರಾಹುಲ್, ಮೂರು ವರ್ಷಗಳ ಹಿಂದೆ ಹೊನ್ನಾವರದ ಅಜಯ್‌ಗೆ ತಾನಿರುವ ಕಂಪೆನಿಯಲ್ಲೇ ಕೆಲಸ ಕೊಡಿಸಿದ್ದ. ಈ ಉದ್ಯೋಗದ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿದ ಆರೋಪಿಗಳು, ಅದರಿಂದ ಕೋಟ್ಯಂತರ ರೂಪಾಯಿ ಗಳಿಸಿದ್ದರು.’

‘ಈ ಮಧ್ಯೆ ಕೇಂದ್ರ ಸರ್ಕಾರ ಹಳೇ ನೋಟುಗಳನ್ನು ರದ್ದುಗೊಳಿಸಿತು. ದಾಖಲೆ ಇಲ್ಲದೆ ಹಣ ಇಟ್ಟುಕೊಂಡಿದ್ದ ಆರೋಪಿಗಳು, ಕೆಲವರಿಗೆ ಕಮಿಷನ್‌ನ ಆಮಿಷವೊಡ್ಡಿ ನಾಲ್ಕೈದು ಕೋಟಿ ಮೌಲ್ಯದ ನೋಟುಗಳನ್ನು ಬದಲಾವಣೆ ಮಾಡಿಸಿದ್ದರು. ಇನ್ನುಳಿದ ₹ 1.28 ಕೋಟಿ ಬದಲಾವಣೆ ಮಾಡಿಸುವಷ್ಟರಲ್ಲಿ ಗಡುವು ಮುಗಿದಿತ್ತು.’ ಎಂದು ಅಧಿಕಾರಿಗಳು ತಿಳಿಸಿದರು.

ಎನ್‌ಆರ್‌ಐ ಮೇಲೆ ಕಣ್ಣು
‘ಎನ್‌ಆರ್‌ ಐಗಳಿಗೆ ಹಳೇ ನೋಟುಗಳನ್ನು ಬದಲಾವಣೆ ಮಾಡಿಸಿಕೊಳ್ಳಲು ಮಾರ್ಚ್ 31ರವರೆಗೂ ಸಮಯ ನೀಡಲಾಗಿದೆ. ಹೀಗಾಗಿ, ಆ ಗಡುವಿನೊಳಗೆ ತಮ್ಮ ಹಣವನ್ನು ಎನ್‌ಆರ್‌ಐಗಳ ಮೂಲಕ ರಿಸರ್ವ್ ಬ್ಯಾಂಕ್‌ನ ಚೆನ್ನೈ ಕಚೇರಿಯಲ್ಲಿ ಬದಲಾವಣೆ ಮಾಡಿಸುವುದು ಆರೋಪಿಗಳ ಉದ್ದೇಶವಾಗಿತ್ತು. ಈ ಬಗ್ಗೆ ನಮ್ಮ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತು’ ಎಂದು ಅಧಿಕಾರಿಗಳು ತಿಳಿಸಿದರು.

ಪೊಲೀಸ್ ಪ್ರತಿತಂತ್ರ
ಆರೋಪಿಗಳನ್ನು ಬಲೆಗೆ ಬೀಳಿಸಲು ಸಿಸಿಬಿ ಪೊಲೀಸರು ವೇಷ ಬದಲಿಸಿಕೊಂಡು ಕಾರ್ಯಾಚರಣೆಗೆ ಇಳಿದರು. ಪಾನ್‌ಬ್ರೋಕರ್ ಸೋಗಿನಲ್ಲಿ ಅಜಯ್‌ಗೆ ಕರೆ ಮಾಡಿದ ಸಿಸಿಬಿ ಇನ್‌ಸ್ಪೆಕ್ಟರ್ ಬಿ.ರಾಜು, ‘ನಿಮ್ಮ ಬಳಿ ಇರುವ ಹಳೇ ನೋಟುಗಳನ್ನು ಶೇ 58ರಷ್ಟು ಕಮಿಷನ್‌ ದರದಲ್ಲಿ ನಾನು ಪಡೆಯುತ್ತೇನೆ. ನಂತರ ನನಗೆ ಪರಿಚಯವಿರುವ ಎನ್‌ಆರ್ಐಗಳ ಮೂಲಕ ಬದಲಾಯಿಸಿಕೊಳ್ಳುತ್ತೇನೆ’ ಎಂದಿದ್ದರು.

ಪೊಲೀಸರ ಸಂಚಿನ ಬಗ್ಗೆ ಅರಿಯದ ಆರೋಪಿ, ಮಂಗಳವಾರ ಸಂಜೆ ಅಪಾರ್ಟ್‌ಮೆಂಟ್ ಬಳಿ ಬರುವಂತೆ ಕರೆದಿದ್ದ. ಅಂತೆಯೇ ಪೊಲೀಸರ ತಂಡ ಸಂಜೆ 6.30ರ ಸುಮಾರಿಗೆ ಅಲ್ಲಿಗೆ ತೆರಳಿತ್ತು. ಪಾನ್‌ಬ್ರೋಕರ್‌ ಸೋಗಿನಲ್ಲಿ ಮೊದಲು ಅಜಯ್‌ನನ್ನು ಭೇಟಿಯಾದ ರಾಜು, ಹಣ ತೋರಿಸುವಂತೆ ಕೇಳಿದ್ದರು.

ಕಾರಿನ ಡಿಕ್ಕಿಯಲ್ಲಿದ್ದ ₹ 50 ಲಕ್ಷ ತೋರಿಸಿದ ಅಜಯ್, ಉಳಿದ ಹಣ ರಾಹುಲ್‌ನ ಕಚೇರಿಯಲ್ಲಿರುವುದಾಗಿ ಹೇಳಿದ್ದ. ಕೂಡಲೇ ಕಾರನ್ನು ಸುತ್ತುವರಿದ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ಹಣ ಜಪ್ತಿ ಮಾಡಿದರು. ಇನ್ನೊಂದು ತಂಡ ಕಚೇರಿ ಮೇಲೆ ದಾಳಿ ನಡೆಸಿ ರಾಹುಲ್‌ನನ್ನು ಬಂಧಿಸಿ, ಅಲ್ಲಿದ್ದ ₹ 78 ಲಕ್ಷ ವಶಕ್ಕೆ ಪಡೆಯಿತು ಎಂದು ಗೊತ್ತಾಗಿದೆ.

ದಂಧೆಕೋರರ ವಿಚಾರಣೆ: ‘ಎನ್‌ಆರ್‌ ಐಗಳು ಸೂಕ್ತ ಕಾರಣ ಹಾಗೂ ಸರಿಯಾದ ದಾಖಲೆ ನೀಡಿ ₹ 50 ಸಾವಿರದವರೆಗೆ ಮಾತ್ರ ಆರ್‌ಬಿಐನ ಕೆಲ ಕೆಲವೇ ಶಾಖೆಗಳಲ್ಲಿ ಹಳೇ ನೋಟುಗಳನ್ನು ಜಮೆ ಮಾಡಬಹುದಾಗಿದೆ. ಹೀಗಿರುವಾಗ, ಈ ದಂಧೆಕೋರರು ಅಷ್ಟೊಂದು ಹಣವನ್ನು ಹೇಗೆ ಬದಲಾಯಿಸಲು ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಬೇಕಿದೆ. ಇದೇ ನಿಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT