ADVERTISEMENT

ಪಿಜಿ ವೈದ್ಯಕೀಯ ಕೋರ್ಸ್‌: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 11:09 IST
Last Updated 16 ಏಪ್ರಿಲ್ 2014, 11:09 IST

ಬೆಂಗಳೂರು: ಸ್ನಾತಕೋತ್ತರ ವೈದ್ಯ­ಕೀಯ ಕೋರ್ಸ್‌ನ ಶೇಕಡ 25ರಷ್ಟು ಸೀಟುಗಳನ್ನು ತನಗೆ ಬಿಟ್ಟುಕೊಡದ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವೇ ಇಲ್ಲ ಎಂದು ಹೈಕೋರ್ಟ್‌ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

‘ಸರ್ಕಾರ ಸಲ್ಲಿಸಿರುವ ಪ್ರಮಾಣ­ಪತ್ರದಲ್ಲಿ ಯಾವುದನ್ನೂ ವಿವರ­ವಾಗಿ ಹೇಳಿಲ್ಲ. ನಿಗದಿತ ಸಂಖ್ಯೆಯ ಸೀಟುಗಳನ್ನು ಕರ್ನಾಟಕ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ (ಪಿಜಿಇಟಿ) ವಿದ್ಯಾರ್ಥಿಗಳಿಗೆ ಬಿಟ್ಟು­ಕೊ­ಡದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನಿನ ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಹೇಳುತ್ತದೆ. ಆದರೆ ಯಾವ ಕ್ರಮ ಜರುಗಿಸಲಾಗುತ್ತದೆ ಎಂಬು­ದನ್ನು ತಿಳಿಸಿಲ್ಲ’ ಎಂದು ನ್ಯಾಯ­ಮೂರ್ತಿ­ಗಳಾದ ಕೆ.ಎಲ್‌. ಮಂಜು­ನಾಥ್‌ ಮತ್ತು ರವಿ ಮಳಿಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಡೀಮ್ಡ್‌ ವಿ.ವಿಗಳು, ಖಾಸಗಿ ವೈದ್ಯ­ಕೀಯ ಶಿಕ್ಷಣ ಸಂಸ್ಥೆ­ಗಳು, ಧಾರ್ಮಿಕ ಮತ್ತು ಭಾಷಾ ಅಲ್ಪ­ಸಂಖ್ಯಾತ ಶಿಕ್ಷಣ ಸಂಸ್ಥೆಗಳು ಕ್ರಮ­ವಾಗಿ ಶೇ 25, ಶೇ 33 ಮತ್ತು ಶೇ 20 ರಷ್ಟು ಸೀಟುಗಳನ್ನು ಸರ್ಕಾ­ರಕ್ಕೆ ಬಿಟ್ಟುಕೊಡಬೇಕು. ಆದರೆ ಆ ಸಂಸ್ಥೆಗಳು ನಿಯಮ ಉಲ್ಲಂಘಿಸು­ತ್ತಿವೆ. ಸರ್ಕಾರ ಅವುಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ’ ಎಂದು ದೂರಿ ವೈದ್ಯಕೀಯ ವಿದ್ಯಾರ್ಥಿ ರಾಘವೇಂದ್ರ ನಾಲತ­ವಾಡ ಸೇರಿ­ದಂತೆ 60ಕ್ಕೂ ಹೆಚ್ಚು ಜನ ಸಲ್ಲಿಸಿರುವ ಅರ್ಜಿ ಇದಾಗಿದೆ.

‘ಇದು ಗಂಭೀರವಾದ ಪ್ರಕರಣ. ಆದರೆ ಸರ್ಕಾರದ ಕಡೆಯಿಂದ ಸಹಕಾರ ದೊರೆಯುತ್ತಿಲ್ಲ. ನಿಯಮ ಉಲ್ಲಂಘಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾವ ಕ್ರಮ ಜರುಗಿಸಲಾಗುತ್ತದೆ ಎಂಬ ಬಗ್ಗೆ ಹೇಳಿಕೆ ಸಲ್ಲಿಸುವಂತೆ ಹಿಂದಿನ ವಿಚಾರಣೆ ವೇಳೆ ಮೌಖಿಕ ನಿರ್ದೇಶನ ನೀಡಲಾಗಿತ್ತು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಇಂದು (ಮಂಗಳವಾರ) ಕೂಡ ಯಾವುದೇ ಪ್ರಯತ್ನ ನಡೆಸಿಲ್ಲ’ ಎಂದು ನ್ಯಾಯಪೀಠ ಕೆಂಡಕಾರಿತು.

‘ಇನ್ನೊಂದು ಪ್ರಮಾಣಪತ್ರ ಸಲ್ಲಿಸುತ್ತೇವೆ’ ಎಂದು ಸರ್ಕಾರಿ ವಕೀಲರು ಈ ಸಂದರ್ಭದಲ್ಲಿ ತಿಳಿಸಿದರು. ‘ನೀವು ಒಂದು ಪ್ರಮಾಣಪತ್ರ ಸಲ್ಲಿಸಿದ ನಂತರ ಇನ್ನೊಂದು ಪ್ರಮಾಣಪತ್ರ ಸಲ್ಲಿಸಬಹುದು. ಆದರೆ ಈಗ ಸಲ್ಲಿಸಿರುವುದು ಪ್ರಮಾಣಪತ್ರದಂತೆ ಇಲ್ಲವೇ ಇಲ್ಲ’ ಎಂದು ಪೀಠ ಪ್ರತಿಕ್ರಿಯಿಸಿ,  ಹೊಸ ಪ್ರಮಾಣ­ಪತ್ರ ಸಲ್ಲಿಸುವಂತೆ  ತಾಕೀತು ಮಾಡಿತು. ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT