ADVERTISEMENT

ಪಿಯು ವರೆಗೆ ಕನ್ನಡ ಕಡ್ಡಾ ಯ

ಬಜೆಟ್‌ ಅಧಿವೇಶನದಲ್ಲಿ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST
ಪಿಯು ವರೆಗೆ ಕನ್ನಡ ಕಡ್ಡಾ ಯ
ಪಿಯು ವರೆಗೆ ಕನ್ನಡ ಕಡ್ಡಾ ಯ   

ಬೆಂಗಳೂರು: ಪ್ರಾಥಮಿಕ ಹಂತದಿಂದ ಪಿಯುಸಿ­ವರೆಗೂ ಕನ್ನಡ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಬಜೆಟ್‌ ಅಧಿವೇಶನ­ದಲ್ಲಿ ಮಂಡಿಸಲು ನಿರ್ಧರಿಸಿದೆ.

ರಾಜ್ಯದ ಎಲ್ಲ ಶಾಲೆಗಳಲ್ಲಿ ಐದನೆ ತರಗತಿ­ವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವು­ದನ್ನು ಕಡ್ಡಾಯ ಗೊಳಿಸುವ ಮಸೂದೆ ಮತ್ತು 12ನೆ ತರಗತಿವರೆಗೆ ಕನ್ನಡವನ್ನು ಒಂದು ವಿಷಯವಾಗಿ ಕಲಿಯುವುದನ್ನು ಕಡ್ಡಾಯ­ಗೊಳಿ­ಸುವ ಇನ್ನೊಂದು ಮಸೂದೆ ಬಗ್ಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸಂಪುಟ ಉಪ ಸಮಿತಿ ಗುರುವಾರ ವಿಧಾನಸೌಧದಲ್ಲಿ ಚರ್ಚೆ ನಡೆಸಿತು.

ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಹಿತರಕ್ಷಣೆಗೆ ಪೂರಕವಾಗಿ ಈ ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

‘ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ಆದೇಶವನ್ನು ಸುಪ್ರೀಂ­ಕೋರ್ಟ್‌ ರದ್ದು ಮಾಡಿದೆ. ಇದರಿಂದ ಎದುರಾ­ಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ತಿದ್ದುಪಡಿ ತರಲಾ­ಗುವುದು. ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮ ಆಗಿರಬೇಕು ಎಂಬ ವಾದ ನಮ್ಮದು’ ಎಂದು ತಿಳಿಸಿದರು.

‘ಶಿಕ್ಷಣ’ವು ಸಮವರ್ತಿ ಪಟ್ಟಿಯಲ್ಲಿ ಸೇರಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವತಂತ್ರವಾಗಿ ಕಾಯ್ದೆ ರೂಪಿಸಿಕೊಳ್ಳುವುದಕ್ಕೆ ಅವಕಾಶವಿದೆ. ಈ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ಶಿಕ್ಷಣದಲ್ಲಿ ರಾಜ್ಯವು ಅನುಸರಿಸಿಕೊಂಡು ಬಂದಿರುವ ಭಾಷಾ ನೀತಿಯನ್ನು ಸದನದ ಮೂಲಕ ಸುಪ್ರೀಂಕೋರ್ಟ್‌ ಗಮನಕ್ಕೆ ತರುವ ಪ್ರಯತ್ನವೂ ಇದರಲ್ಲಿ ಸೇರಿದೆ ಎಂದು ಹೇಳಿದರು.

ಇನ್ನೊಂದು ಮಸೂದೆ: ಒಂದರಿಂದ 12ನೆ ತರಗತಿವರೆಗೆ ಎಲ್ಲ ಮಕ್ಕಳು ಒಂದು ವಿಷಯವನ್ನಾಗಿ ಕನ್ನಡ ಕಲಿಯುವುದನ್ನೂ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಮಸೂದೆಯೊಂದನ್ನು ಬಜೆಟ್‌ ಅಧಿ­ವೇಶನ­ದಲ್ಲಿ ಮಂಡಿಸಲಾಗುವುದು. ಈ ಬಗ್ಗೆಯೂ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸ­ಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ಸಂಬಂಧ ವಿಧಾನ­ಮಂಡಲ­ದಲ್ಲಿ ನಿರ್ಣಯ ಅಂಗೀಕರಿಸುವ ಪ್ರಸ್ತಾವವೂ ಇದೆ ಎಂದು ತಿಳಿಸಿದರು.

ಪ್ರಧಾನಿಗೆ ಪತ್ರ: ‘ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಿಂದ ಉದ್ಭವಿಸಿರುವ ಸಮಸ್ಯೆ ಕುರಿತು ಪ್ರಧಾನಿ, ಕೇಂದ್ರ ಮಾನವ ಸಂಪನ್ಮೂಲ ಸಚಿವರು ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿ­ದ್ದೇನೆ. ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳ ಹಿತ­ರಕ್ಷಣೆಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿದ್ದೇನೆ’ ಎಂದು ರತ್ನಾಕರ ಹೇಳಿದರು.

ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಿಗೂ ಪತ್ರ ಬರೆಯಲಾಗಿದೆ. ಸಂವಿಧಾನ ತಿದ್ದುಪಡಿಗೆ ನಿರ್ಣಯ ಅಥವಾ ಖಾಸಗಿ ಮಸೂದೆ ಮಂಡಿಸು­ವಂತೆ ಮನವಿ ಮಾಡಲಾಗಿದೆ ಎಂದರು.

ಕೋರ್ಟ್‌ ಗಡುವು ಕಾರಣ
ಕಲಿಕಾ ಮಾಧ್ಯಮ ಕುರಿತು ಸುಪ್ರೀಂ­ಕೋರ್ಟ್‌ ನೀಡಿರುವ ತೀರ್ಪಿನ ಅನುಷ್ಠಾನ ಕೋರಿ ಕೆಲ­ವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ­ದ್ದರು. ಸುಪ್ರೀಂ­ಕೋರ್ಟ್‌ ತೀರ್ಪು ಪಾಲನೆಗೆ ಸಂಬಂಧಿ­ಸಿದಂತೆ ಮಾರ್ಚ್‌ 31­ರೊಳಗೆ ಸ್ಪಷ್ಟ ನಿಲುವು ಪ್ರಕಟಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಈ ಕಾರಣದಿಂದ ಬಜೆಟ್‌ ಅಧಿವೇಶನ­ದಲ್ಲಿ ತಿದ್ದುಪಡಿ ಮಸೂದೆ­ಯನ್ನು ಮಂಡಿಸುವುದು ಅನಿವಾರ್ಯ ಎಂದು ಹೇಳಿದರು.

ಕಲಿಕಾ ಮಾಧ್ಯಮ ಪ್ರಕರಣದಲ್ಲಿ ಸುಪ್ರೀಂ­ಕೋರ್ಟ್‌ನ ಸಂವಿಧಾನ ಪೀಠ ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ‘ಕ್ಯುರೇಟಿವ್‌’ (ಪರಿಹಾರಾತ್ಮಕ) ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ. ತಿದ್ದುಪಡಿ ಮಸೂದೆಯ ಪ್ರತಿಯನ್ನು ‘ಕ್ಯುರೇಟಿವ್’ ಅರ್ಜಿ ವಿಚಾರಣೆ ವೇಳೆ ದಾಖಲೆ­ಯಾಗಿ ಹಾಜರು­ಪಡಿಸುವ ಯೋಚನೆಯೂ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.