ADVERTISEMENT

ಪೂರೈಕೆಯಾಗುತ್ತಿರುವುದು ಶುದ್ಧ ನೀರು: ಖಾದರ್‌

ವಾರದಲ್ಲಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಗುಲ್ಬರ್ಗ: ‘ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮ-ದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪೂರೈಕೆಯಾಗುವ ನೀರಿನ ಮೂಲ ಶುದ್ಧವಾಗಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ವಿ.ವಿಯ ವಿದ್ಯಾರ್ಥಿ ನಿಲಯದಲ್ಲಿರುವ ಟ್ಯಾಂಕ್‌ಗಳು ಸ್ವಚ್ಛವಾಗಿಲ್ಲ. ಅಲ್ಲದೇ, ಗುಣಮಟ್ಟದ ನೀರು ಶುದ್ಧೀಕರಣ ಘಟಕ ಅಳವಡಿಸಿಲ್ಲ ಎಂಬ ಮಾಹಿತಿ ಲಭ್ಯ-ವಾಗಿದೆ. ಇದನ್ನು ಸರಿಪಡಿಸಲು ವಿ.ವಿ ಮುಂದಾಗ-ಬೇಕು’ ಎಂದು ಸಲಹೆ ನೀಡಿದರು.

‘ಕುಡಿಯುವ ನೀರಿನಲ್ಲಿ ವೈರಾಣುಗಳಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಹೀಗಾಗಿ, ಜಿಲ್ಲಾ ಆರೋ-ಗ್ಯಾಧಿಕಾರಿ ಮತ್ತು ಆಹಾರ ಸುರಕ್ಷಾ ಅಧಿಕಾರಿ-ಗಳು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಅಲ್ಲದೇ, ಅಮರ್ಜಾ-ದಿಂದ ನೀರು ಸರಬರಾಜು ಆಗುತ್ತಿರುವ ಹಳ್ಳಿಗಳಲ್ಲೂ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಆದರೆ, ಬೇರೆಡೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಶುದ್ಧ ನೀರು ಹಾಗೂ ಗುಣಮಟ್ಟದ ಆಹಾರದ ವಿಷಯದಲ್ಲಿ ವಿ.ವಿ ಹೆಚ್ಚಿನ ನಿಗಾ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿದ್ಯಾರ್ಥಿಗಳು ಸಾಕಷ್ಟು ಆರೋಪ ಮಾಡಿದ್ದಾರೆ. ಅವುಗಳನ್ನು ಬಗೆಹರಿಸಲು ವಿ.ವಿ ಮುಂದಾಗಬೇಕು’ ಎಂದರು.
ಜಂಟಿ ತನಿಖೆ ಬಳಿಕ ವರದಿ: ಜಿಲ್ಲಾ ಆರೋಗ್ಯಾಧಿಕಾರಿ, ಆಹಾರ ಸುರಕ್ಷಾ ಅಧಿಕಾರಿಗಳು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗ-ಳೊಂದಿಗೆ ಜಂಟಿ ತನಿಖೆ ನಡೆಸಿ ಒಂದು ವಾರದೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಸೂಚಿಸಿದರು.

ಊರಿಗೆ ತೆರಳಿದ ವಿದ್ಯಾರ್ಥಿಗಳು: ವಿ.ವಿ ದಿಢೀರ್ ರಜೆ ಘೋಷಿಸಿದ್ದರಿಂದ ಕಂಗಾಲಾಗಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ 200 ಮಂದಿ ಶನಿವಾರ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿಂದ, ತತ್ಕಾಲ್ ಟಿಕೆಟ್ ಪಡೆದುಕೊಂಡು ತಮ್ಮ ಊರುಗಳಿಗೆ ಪ್ರಯಾಣಿಸಲಿದ್ದಾರೆ. ಸದ್ಯ ಕಡಗಂಚಿ-ಯಲ್ಲಿ 100 ವಿದ್ಯಾರ್ಥಿಗಳು ಉಳಿದುಕೊಂಡಿದ್ದು, ಅವರೆಲ್ಲ ಅ. 26 ರಂದು ಊರಿಗೆ ಹೋಗಲು ತಯಾರಿ ಮಾಡಿಕೊಂಡಿದ್ದಾರೆ.

‘ವಿದ್ಯಾರ್ಥಿನಿಯರಲ್ಲಿ ಬಹುತೇಕರು ಊರಿಗೆ ಹೋಗಿದ್ದು, 30 ಮಂದಿ ಉಳಿದುಕೊಂಡಿದ್ದಾರೆ. ಈ ಪೈಕಿ 10 ವಿದ್ಯಾರ್ಥಿನಿಯರು ಉತ್ತರ ಭಾರತದವ-ರಾಗಿದ್ದಾರೆ. ಇವರನ್ನು ನಗರದಲ್ಲಿರುವ ಅಂಬೇಡ್ಕರ್ ವಿದ್ಯಾರ್ಥಿನಿಯರ ನಿಲಯಕ್ಕೆ ಸ್ಥಳಾಂತರಿಸಲಾಗಿದ್ದು, ಇವರು ಕೂಡ ಅ. 26ರಂದು ಊರಿಗೆ ತೆರಳಲಿದ್ದಾರೆೆ’ ಎಂದು ವಿ.ವಿಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಗಣೇಶ ಪವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿನಿ ಬಿಡುಗಡೆ: ‘ವೈರಾಣು ಸೋಂಕಿನಿಂದ ಬಳಲಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಶಾರದಾ ಗುಣಮುಖರಾಗಿದ್ದು, ಶನಿವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅ.26ರಂದು ಅವರ ಸಹೋದರನ ಜತೆ ಹೈದರಾ-ಬಾದ್‌ಗೆ ತೆರಳಲಿದ್ದಾರೆ’ ಎಂದು ಪವಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.