ADVERTISEMENT

ಪೆಟ್ರೋಲಿಯಂ: ಇನ್ನೂ ನೀಗದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬುಧವಾರವೂ ಪೆಟ್ರೋಲ್‌ಗೆ ಹಾಹಾಕಾರ ಮುಂದುವರಿದಿದ್ದು, ಹಲ ವೆಡೆ ಡೀಸೆಲ್‌ ಲಭ್ಯತೆ ಸಾಮಾನ್ಯ ಸ್ಥಿತಿಗೆ ಮರಳಿತ್ತು.

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಡೀಸೆಲ್‌ ಲಭ್ಯವಿತ್ತು. ಆದರೆ ಪೆಟ್ರೋಲ್‌ ಕೊರತೆಯಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತ್ತು. ಬೆಳಗಾವಿ ನಗರದ ಬಹುತೇಕ ಬಂಕ್‌ಗಳಿಗೆ ತೈಲ ಕಂಪೆನಿಗಳಿಂದ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾಗಿದ್ದರಿಂದ ಪೆಟ್ರೋಲ್‌– ಡೀಸೆಲ್‌ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಜಿಲ್ಲೆಯ ಚಿಕ್ಕೋಡಿ ಸೇರಿದಂತೆ ಗಡಿಭಾಗದ ಜನತೆ ಇಂಧನ ಖರೀದಿಗೆ ಪಕ್ಕದ ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ. ಹಾವೇರಿಯಲ್ಲಿ ಸಮಸ್ಯೆ ಇಲ್ಲ. ಗದಗ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೂ ವ್ಯಾಪಿಸಿದೆ.

‘ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕುವಂತೆ ಬಂಕ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಹುಬ್ಬಳ್ಳಿಯ ಬಿಪಿಸಿಎಲ್‌ನ ಮಾರಾಟ ವಿಭಾಗದ ವ್ಯವಸ್ಥಾಪಕ ನೀಲೇಶ್ ವೈಚೆಲ್‌ ತಿಳಿಸಿದರು.

ವಿಜಯಪುರದಲ್ಲಿ ನಿತ್ಯದ ಬೇಡಿಕೆಗೆ ತಕ್ಕಷ್ಟು ಪೆಟ್ರೋಲ್‌–ಡೀಸೆಲ್‌ ಪೂರೈಕೆಯಾಗದಿರುವುದು ಬಂಕ್‌ ಮಾಲೀಕರಿಗೆ ಸಾಕಷ್ಟು ತಲೆ ನೋವು ಸೃಷ್ಟಿಸಿದೆ. ಇದರ ಜತೆಗೆ ವಹಿವಾಟಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಬಾಗಲಕೋಟೆ ಜಿಲ್ಲೆ ಸಮಸ್ಯೆ ಬಗ್ಗೆ ತೈಲ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು  ಸಚಿವ ಎಸ್‌.ಆರ್‌.ಪಾಟೀಲ ತಿಳಿಸಿದರು.

ಕೇಂದ್ರದ ಜತೆ ಚರ್ಚೆ: ದಿನೇಶ್‌
ಬೆಂಗಳೂರು: ‘ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ ಅಭಾವದಿಂದ ತಲೆದೋರಿರುವ ಸಮಸ್ಯೆ  ಬಗೆಹರಿಸುವ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ಜತೆ ಚರ್ಚಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಪೂರೈಕೆಯಲ್ಲಿ ವ್ಯತ್ಯಾಸ ಉಂಟಾದಾಗ ನಾವು ಅವರ ಗಮನಕ್ಕೆ ತರುವ ಕೆಲಸವನ್ನು ಮಾಡಬಹುದು ಎಂದರು.

ನಮ್ಮ ಇಲಾಖೆಯ ಅಧಿಕಾರಿಗಳು ಈಗಾಗಲೇ ಈ ವಿಚಾರವಾಗಿ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯದ ಜತೆ ಚರ್ಚಿಸಿದ್ದಾರೆ. ನಾನು ದೆಹಲಿಯಲ್ಲಿದ್ದೇನೆ.  ಪೆಟ್ರೋಲಿಯಂ ಸಚಿವರನ್ನು ಗುರುವಾರ ಭೇಟಿ ಮಾಡಿ ಸಮಸ್ಯೆಯ ಗಂಭೀರತೆ ಅವರ   ಗಮನಕ್ಕೆ ತರುತ್ತೇನೆ’ ಎಂದು ದೂರವಾಣಿ ಮೂಲಕ ಸಚಿವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.