ADVERTISEMENT

ಪ್ರತ್ಯೇಕ ಧರ್ಮ: ತಿರಸ್ಕರಿಸಿದ್ದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
ಅನಂತಕುಮಾರ್‌
ಅನಂತಕುಮಾರ್‌   

ನವದೆಹಲಿ: ಜನಗಣತಿ ಸಂದರ್ಭ ವೀರಶೈವ– ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ 2010ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು 2013ರಲ್ಲಿ ತಿರಸ್ಕರಿಸಿದ್ದ ಕಾಂಗ್ರೆಸ್‌ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ, ವೀರಶೈವ– ಲಿಂಗಾಯತ ಸಮುದಾಯವು ಹಿಂದೂ ಧರ್ಮದ ಒಂದು ಪಂಗಡ ಎಂದು ಹೇಳಿತ್ತು.

ಕೇಂದ್ರದ ಗೃಹ ಕಚೇರಿಯ ಕೋರಿಕೆಯ ಮೇರೆಗೆ ಪರಿಶೀಲನೆ ನಡೆಸಿ, 2013ರ ನವೆಂಬರ್‌ 14ರಂದು ಈ ಕುರತು ಪತ್ರ ಬರೆದಿದ್ದ ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಕಚೇರಿಯು, ‘ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಪ್ರತ್ಯೇಕ ಧರ್ಮ ಸ್ಥಾನಮಾನದ ಬೇಡಿಕೆಯು ಅತಾರ್ಕಿಕವಾದದ್ದು’ ಎಂದು ಅಭಿಪ್ರಾಯಪಟ್ಟಿತ್ತು.

ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮವನ್ನು ಸೂಚಿಸುವ ಪ್ರತ್ಯೇಕ ಕಾಲಂ, ಸಾಲು ಹಾಗೂ ಕೋಡ್‌ ಸಂಖ್ಯೆ ನಮೂದಿಸಿ, ಜನಗಣತಿಯ ಅರ್ಜಿ ನಮೂನೆ ಮುದ್ರಿಸುವಂತೆ ವೀರಶೈವ ಮಹಾಸಭಾ ಆಗ ಕೋರಿತ್ತು.

ADVERTISEMENT

ವೀರಶೈವ– ಲಿಂಗಾಯತ ಸಮುದಾಯವು 4 ಕೋಟಿಗೂ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಒಳಗೊಂಡಿದ್ದು, ಬೌದ್ಧ, ಸಿಖ್‌ ಹಾಗೂ ಜೈನ ಧರ್ಮದ ಅನುಯಾಯಿಗಳಿಗಿಂತ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ ಎಂದು ಮಹಾಸಭಾ ತಿಳಿಸಿತ್ತು.

ಪರಿಶಿಷ್ಟರಿಗೆ ಅನ್ಯಾಯ: 1990ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿಯನ್ನು ಉಲ್ಲೇಖಿಸಿದ್ದ ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಕಚೇರಿಯು, ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಜನಗಣತಿಯ ಅರ್ಜಿಯಲ್ಲಿ ನಮೂದಿಸಿದಲ್ಲಿ ಆ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿಯ ಜನರು ಮೀಸಲಾತಿ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ. ಹಿಂದೂ, ಸಿಖ್‌ ಮತ್ತು ಜೈನ ಧರ್ಮದಲ್ಲಿ ಮಾತ್ರ ಪರಿಶಿಷ್ಟ ಜಾತಿಯವರಿದ್ದಾರೆ ಎಂದು ಹೇಳಿತ್ತು.

ವೀರಶೈವ– ಲಿಂಗಾಯತ ಸಮುದಾಯದಲ್ಲಿ ಇರುವ ಪರಿಶಿಷ್ಟ ಜಾತಿಯ ಜನರಿಗೆ ಮೀಸಲಾತಿ ಸೌಲಭ್ಯ ತಪ್ಪಿದಲ್ಲಿ, ಇಡೀ ಸಮುದಾಯವನ್ನೇ ಒಡೆದಂತಾಗುತ್ತದೆ ಎಂಬ ಕಾರಣದಿಂದಲೇ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.

ಜಂಗಮರು ಧರಿಸುವ ವಿಭೂತಿ, ಲಿಂಗ ಪೂಜೆಯನ್ನು ವಿವರಿಸುವ ಉಕ್ತ ಲೇಖನಗಳು ಲಭ್ಯವಿದ್ದು, ವೀರಶೈವ– ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗ ಎಂಬುದನ್ನು ಸಾಬೀತುಪಡಿಸುವ ಸಾಹಿತ್ಯವೂ ಲಭ್ಯವಿದೆ ಎಂದು ಆಗ ಪ್ರಸ್ತಾಪಿಸಿರುವ ಕೇಂದ್ರ, ಸಿ.ಬಿ. ಬ್ರೌನ್‌ ಅವರು 1840ರಲ್ಲಿ ಬರೆದಿರುವ ‘ಜಂಗಮ್ಸ್‌ ಇನ್‌ ಮದ್ರಾಸ್‌ ಜರ್ನಲ್‌ ಲಿಟರೇಚರ್‌ ಆಫ್‌ ಸೈನ್ಸ್‌’ ಎಂಬ ಗ್ರಂಥದಲ್ಲಿ ಈ ಉಲ್ಲೇಖವಿದೆ. ವೀರಶೈವ– ಲಿಂಗಾಯತ ಸಮುದಾಯವು ಬ್ರಾಹ್ಮಣರಂತೆ ಶಿವನನ್ನು ಒಪ್ಪಿಕೊಳ್ಳದಿದ್ದರೂ, ಶಿವಾಲಯಗಳಿಗೆ, ಇತರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಸಂಪ್ರದಾಯ ಆಚರಣೆಯಲ್ಲಿದೆ. ಈ ಸಮುದಾಯದ ಜನರು ಲಿಂಗಧಾರಿಗಳಾಗಿದ್ದಾರೆ ಎಂಬುದನ್ನು ಖಚಿತಪಡಿಸಿದೆ ಎಂಬುದಾಗಿ ವಿವರಿಸಿದೆ.

ಬಸವನನ್ನು ಗುರು ಎಂದೇ ಈ ಸಮುದಾಯ ಭಾವಿಸಿದೆ. ಶಿವನನ್ನು ಮಾತ್ರ ದೇವರು ಎಂದು ನಂಬಿರುವ ಇವರು, ಹಿಂದೂಗಳು ಪೂಜಿಸುವ ಇತರ ದೇವರುಗಳನ್ನು ಪೂಜಿಸುವುದಿಲ್ಲ ಎಂದು ಉಲ್ಲೇಖಿಸಿ, ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಕಚೇರಿ ಬರೆದಿರುವ ಈ ಪತ್ರದ ಪ್ರತಿಯನ್ನು ಶಾಮನೂರು ಶಿವಶಂಕರಪ್ಪ ಅವರ ವಿಳಾಸಕ್ಕೂ ಕಳುಹಿಸಲಾಗಿದೆ.

ಪ್ರತ್ಯೇಕ ಧರ್ಮ: ತಿರಸ್ಕರಿಸಿದ್ದ ಕೇಂದ್ರ

ನವದೆಹಲಿ: ವೀರಶೈವ– ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ 2013ರಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಶಿಫಾರಸನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ತಿರಸ್ಕರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ತಿಳಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜಕೀಯ ದುರುದ್ದೇಶಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದರು. ರಾಬರ್ಟ್‌ ಕ್ಲೈವ್‌ ಈ ಕೆಲಸ ಮಾಡಿದ್ದ ಮೊದಲ ಬ್ರಿಟಿಷ್‌ ಅಧಿಕಾರಿಯಾಗಿದ್ದರು. ಇದೀಗ ಮತ ಬ್ಯಾಂಕ್‌ ರಾಜಕಾರಣದ ದುರುದ್ದೇಶದೊಂದಿಗೆ ಅದೇ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಕರ್ನಾಟಕದ ರಾಬರ್ಟ್‌ ಕ್ಲೈವ್‌ ಎನ್ನಿಸಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.

ಮಹಾರಾಷ್ಟ್ರ ಸರ್ಕಾರದ ಶಿಫಾರಸನ್ನು ಯುಪಿಎ ಸರ್ಕಾರ ತಿರಸ್ಕರಿಸಿದ್ದಲ್ಲದೆ, ವೀರಶೈವ– ಲಿಂಗಾಯತ ಸಮುದಾಯವು ಹಿಂದು ಧರ್ಮದ ಒಂದು ಪಂಗಡ ಎಂದು ಅಭಿಪ್ರಾಯಪಟ್ಟಿದೆ. ಆದರೂ ಹಿಂದೂ ಧರ್ಮವನ್ನು ವಿಭಜಿಸುವ ಕೆಟ್ಟ ರಾಜಕಾರಣವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಜಾತಿ ವೈಷಮ್ಯದ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕದಡುವ ಕೆಲಸ ಮುಂದುವರಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದ ಜನರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.