ADVERTISEMENT

ಪ್ರಧಾನಿ ಮೋದಿ ಹೊಸದಾಗಿ ಹೇಳಲು ಸುಳ್ಳುಗಳೆ ಉಳಿದಿಲ್ಲ : ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ

ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 15:47 IST
Last Updated 26 ಏಪ್ರಿಲ್ 2018, 15:47 IST
ಜಿಗ್ನೇಶ್ ಮೇವಾನಿ
ಜಿಗ್ನೇಶ್ ಮೇವಾನಿ   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಡೆಯುತ್ತಿರುವ ಈ ವಿಧಾನಸಭೆ ಚುನಾವಣೆ ಇಡೀ ದೇಶದ ಭವಿಷ್ಯದ ದಿಕ್ಕನ್ನು ತೀರ್ಮಾನಿಸಲಿದೆ ಎಂದು ಗುಜರಾತಿನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.

ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ನಂತಿರುವ ಈ ಚುನಾವಣೆಯಲ್ಲಿ ಬಿಜೆಪಿ ನಾಗಾಲೋಟ ತಡೆಹಿಡಿಯಬೇಕು. ಮುಂದಿನ ಚುನಾವಣೆಯಲ್ಲಿ ದೇಶವಿಡೀ ಬಿಜೆಪಿಯನ್ನು ಹೋಗಲಾಡಿಸಬೇಕು ಎಂದು ತಿಳಿಸಿದರು.

‘ಮತದಾನಕ್ಕೆ ಎರಡು ವಾರಗಳು ಬಾಕಿ ಇವೆ. ಈ ನಡುವೆ ನಾನು ಅನೇಕ ಬಾರಿ ಕರ್ನಾಟಕಕ್ಕೆ ಬಂದಿರುವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ರಾಜ್ಯಕ್ಕೆ ಬರಲು ಧೈರ್ಯವಿಲ್ಲ. ಏಕೆಂದರೆ ಎಲ್ಲಾ ಸುಳ್ಳು ಹೇಳಿ ಮುಗಿಸಿದವರಿಗೆ ಹೊಸದಾಗಿ ಹೇಳಲು ಏನೂ ಉಳಿದಿಲ್ಲ. 2 ಕೋಟಿ ಉದ್ಯೋಗಾವಕಾಶ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮಾ ಮಾಡುವುದು ಸೇರಿದಂತೆ ಹಲವಾರು ಸುಳ್ಳು ಹೇಳಿ ಇದೀಗ ಆ ಪ್ರಶ್ನೆಗಳಿಗೆ ಉತ್ತರಿಸಲು ಶಕ್ತಿ ಕಳೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮೋದಿ ಅವರ 56 ಇಂಚಿನ ಎದೆಯನ್ನು ಜಗತ್ತೇ ನೋಡಿದೆ. ಆದರೆ ಅಂತಹವರಿಗೆ ಇವತ್ತು ಅತ್ಯಾಚಾರಿಗಳ ಮೇಲೆ ಕ್ರಮಕೈಗೊಳ್ಳಲು ಶಕ್ತಿ ಇಲ್ಲದಂತಾಗಿದೆ. ಅನೇಕ ಘಟನೆಗಳ ಬೆನ್ನಲ್ಲಿ ಪ್ರತಿಭಟನಾಕಾರರ ಹೋರಾಟ ತೀವ್ರಗೊಂಡ ನಂತರ 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕಾಗಿ ಸುಗ್ರೀವಾಜ್ಞೆ ತಂದಿದ್ದಾರೆ’ ಎಂದು ದೂರಿದರು.

‘ಬಿಜೆಪಿಯನ್ನು ಇವತ್ತು ಜನ ಭಾರತೀಯ ಜನತಾ ಪಕ್ಷವೆಂದು ಕರೆಯುವುದಿಲ್ಲ. ಬದಲು ಬಲಾತ್ಕಾರ ಮಾಡಿ ಪ್ರಾಣಹರಣ ಮಾಡುವ ಪಕ್ಷ ಎಂದು ತಿಳಿದುಕೊಳ್ಳುವಷ್ಟರ ಮಟ್ಟಿಗೆ ಅದರ ಚಹರೆಗಳು, ಕಾರ್ಯಕ್ರಮಗಳು ನಡೆದಿವೆ. ಘರ್‌ ವಾಪಸಿ, ಲವ್‌ ಜಿಹಾದ್, ಗೋಸಂರಕ್ಷಣೆ ಹೆಸರಿನಲ್ಲಿ ಪ್ರಾಣ ತೆಗೆದಿದ್ದಾರೆ. ಇದೀಗ ಪರಿಶಿಷ್ಟ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸಿದ್ದಾರೆ’ ಎಂದು ಕಿಡಿಕಾರಿದರು.

‘ಹಿಂದೂಗಳ ಪರ ಎಂದು ಹೇಳಿಕೊಳ್ಳುವ ಬಿಜೆಪಿಯೇ ಅತ್ಯಂತ ಹಿಂದೂ ವಿರೋಧಿ ಪಕ್ಷವಾಗಿದೆ. ಗುಜರಾತ್‌ನಲ್ಲಿ 22 ವರ್ಷ ಅಧಿಕಾರ ನಡೆಸಿದ ಮೋದಿ ಶ್ರೀಮಂತರ ಪರವಾಗಿ ಕೆಲಸ ಮಾಡಿದ್ದು ಬಿಟ್ಟು, ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ರೈತರ ಪೈಕಿ ಒಂದೇ ಒಂದು ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಇವತ್ತು ಕಾರ್ಮಿಕರಿಗೆ ಕನಿಷ್ಠ ಕೂಲಿ ಕೊಡಲಿಲ್ಲ. ಬದಲು ಕಾರ್ಮಿಕ ಕಾನೂನುಗಳನ್ನು ನಾಶ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ಈ ಚುನಾವಣೆಯಲ್ಲಿ ದಲಿತರು, ಸವರ್ಣೀಯರು, ರಾಮ, ಅಲ್ಲಾ, ಮಂದಿರ, ಮಸೀದಿ ಹೆಸರಿನಲ್ಲಿ ಬಿಜೆಪಿಯವರು ಸಮಾಜ ಒಡೆಯಲು ಪ್ರಯತ್ನಿಸುತ್ತಾರೆ. ಬಸವಣ್ಣನವರ ಸಮಾನತೆ ಸಂಸ್ಕೃತಿ ಪ್ರತಿಪಾದಿಸುವ ಈ ನೆಲದಲ್ಲಿ ಸೌಹಾರ್ದ ಸಂಸ್ಕೃತಿಗಾಗಿ ಒಗ್ಗೂಡಿ ಹೋರಾಡಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.