ADVERTISEMENT

ಪ್ರಭಾವಕ್ಕೆ ಮಣಿದ ಸರ್ಕಾರ: ಆರೋಪ

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST

ಬೆಂಗಳೂರು: ರಾಜ್ಯ ಸರ್ಕಾರ ರಾಜಕೀಯ ಪ್ರಭಾವಕ್ಕೆ ಮಣಿದು 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿಷಯದಲ್ಲಿ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿದೆ. ಇದರ ಪರಿಣಾಮವೇ 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.

‘ಕೆಪಿಎಸ್‌ಸಿ ಅಕ್ರಮಗಳಿಗೆ  ಸಂಬಂಧಿಸಿದಂತೆ ಸಿಐಡಿ ನಡೆಸಿದ ತನಿಖೆ ಇತ್ತೀಚಿನ ದಿನಗಳಲ್ಲೇ ನಡೆಸಿದ ಅತ್ಯಂತ ಉತ್ತಮ ತನಿಖೆ ಎನಿಸಿದೆ. ಆದರೆ ರಾಜ್ಯ ಸರ್ಕಾರ ಹತಾಶ ಸ್ಥಿತಿಯಲ್ಲಿದೆ. ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೆಸರಿಸಲಾದ 46 ಅಭ್ಯರ್ಥಿಗಳನ್ನು ದೋಷಮುಕ್ತ ಎಂದು ತೀರ್ಮಾನಿಸಿರುವ ಹಿಂದೆ ರಾಜಕಾರಣ ಕೆಲಸ ಮಾಡುತ್ತಿದೆ’ ಎನ್ನುತ್ತಾರೆ ಅವರು.

ADVERTISEMENT

ಗೆಜೆಟ್‌ ಆದೇಶ ಬರಬೇಕು..: ‘ಸರ್ಕಾರ ಈ ಸಂಬಂಧ  ಗೆಜೆಟ್‌ ಆದೇಶ ಪ್ರಕಟಸಿದ ಮೇಲೆಯೇ ಕೋರ್ಟ್‌ಗೆ ಹೋಗಬೇಕಾಗುತ್ತದೆ. ಆಗ ಈ ಪ್ರಕರಣ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹೋಗಬೇಕೊ (ಕೆಎಟಿ), ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಬೇಕೊ ಅಥವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಮೂಲಕ ಇದನ್ನು ಪ್ರಶ್ನಿಸಬೇಕೊ ಎಂಬ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.  ಬಾಧಿತರೇ ಇದರ ವಿರುದ್ಧ ಹೋರಾಡಬೇಕು. ಅಷ್ಟಕ್ಕೂ ಇದು  ಯಾವ ಕಾಲಕ್ಕೆ ತೀರ್ಮಾನ ಆಗುವುದೊ’ ಎಂಬ ವ್ಯಥೆಯನ್ನು ರವಿಕೃಷ್ಣಾರೆಡ್ಡಿ ವ್ಯಕ್ತಪಡಿಸಿದರು.

ವಿಶ್ವಾಸಾರ್ಹತೆ ಇಲ್ಲ: ‘ಕೆಪಿಎಸ್‌ಸಿ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಸರ್ಕಾರ ವಿಶ್ವಾಸಾರ್ಹತೆ ಕಳೆದುಕೊಂಡಿದೆ’ ಎಂಬ ಅಭಿಪ್ರಾಯವನ್ನು ವಕೀಲರು ಮತ್ತು ಮುಖ್ಯಮಂತ್ರಿ ಆಪ್ತರೂ ಆದ ಶಾಸಕರೊಬ್ಬರು ವ್ಯಕ್ತಪಡಿಸಿದರು. ತಮ್ಮ ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನೊಂದಿಗೆ ಅವರು ಮಾತನಾಡಿದರು.

‘ಇಂತಹ ನಿರ್ಧಾರ ಕೈಗೊಳ್ಳುವುದಾಗಿದ್ದರೆ ಗೋನಾಳು ಭೀಮಪ್ಪ  ಏಕೆ ಜೈಲಿಗೆ ಹೋಗಬೇಕಿತ್ತು’ ಎಂದು ಪ್ರಶ್ನಿಸಿದ ಅವರು, ‘ಇದೇ ನಿರ್ಧಾರವನ್ನು 2013–2014ರಲ್ಲೇ ತೆಗೆದುಕೊಳ್ಳಬಹುದಿತ್ತಲ್ಲವೇ’ ಎಂದರು.

‘ಎಲ್ಲಾ ಪಕ್ಷದವರೂ ಈಗ ಹೇಳುವುದೇನೆಂದರೆ, 2011ನೇ ಬ್ಯಾಚ್‌ನಲ್ಲಿ ಆಯ್ಕೆಯಾದವರಲ್ಲಿ ಒಕ್ಕಲಿಗರು, ಪರಿಶಿಷ್ಟ ಪಂಗಡದವರು, ಕುರುಬರು, ಹಿಂದುಳಿದ ವರ್ಗದವರೇ ಜಾಸ್ತಿ ಇದ್ದಾರೆ. ಏನೊ ಜೀವನದಲ್ಲಿ ಒಮ್ಮೆ ಇಂತಹ ಅವಕಾಶ ಪಡೆದಿದ್ದಾರೆ. 300 ಅಭ್ಯರ್ಥಿಗಳು ತಲಾ ₹ 3 ಲಕ್ಷ ಕೊಟ್ಟಿದ್ದಾರೆ. ಕಷ್ಟದಲ್ಲಿರುವ ಈ ಅಭ್ಯರ್ಥಿಗಳನ್ನೆಲ್ಲಾ ಯಾಕೆ ಹೊರಗಿಡುತ್ತೀರಿ ಎಂದು ಸಿದ್ದರಾಮಯ್ಯರ ಮುಂದೆ ಅಲವತ್ತುಕೊಂಡಿದ್ದಾರೆ. ಹಾಗಾಗಿಯೇ ಈ  ಪ್ರಕರಣಕ್ಕೆ ಕೊನೆ ಮೊಳೆ ಹೊಡೆಯಲಾಗುತ್ತಿದೆ’ ಎಂಬುದು ಅವರ ಆರೋಪ.

ನೋಟಿಸ್ ಕೂಡಾ ಬೇಡವೇ?: ‘ಮುಖ್ಯಮಂತ್ರಿ ಈ ವಿಷಯದಲ್ಲಿ ತಮ್ಮ ಮುಖ ಉಳಿಸಿಕೊಳ್ಳಲಿಕ್ಕಾದರೂ 46 ಜನ ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ಅವರಿಂದ ವಿವರಣೆ ಪಡೆಯಬಹುದಿತ್ತು. ಸರ್ಕಾರ ಈ ರೀತಿ ನಡೆದರೆ ದೂರುದಾರರಿಗೆ ಯಾವ ನೈತಿಕ ಧೈರ್ಯ ಉಳಿಯುತ್ತದೆ’ ಎಂಬುದು 2011ರ ಬ್ಯಾಚ್‌ನ ಆಯ್ಕೆ ವಂಚಿತ ಅಭ್ಯರ್ಥಿಗಳ ಅಳಲು.

‘ಪಿಐಎಲ್‌ ಉತ್ತಮ ಮಾರ್ಗ’
‘ಕೆಎಟಿ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಿತ್ತು. ಕನಿಷ್ಠ ಸಿಐಡಿ ತನಿಖೆಯಲ್ಲಿ ಉಲ್ಲೇಖಿತರಾದ 46 ಜನರ ವಿರುದ್ಧವಾದರೂ ಕ್ರಮಕ್ಕೆ ಮುಂದಾಗಬೇಕಿತ್ತು’ ಎಂಬುದು  1998, 1999 ಹಾಗೂ 2004ರ ಬ್ಯಾಚ್‌ನ ಆಯ್ಕೆಯಾದ ಅಭ್ಯರ್ಥಿಗಳ ಪರ ವಕೀಲ ರಹಮತ್ಉಲ್ಲಾ ಕೊತ್ವಾಲ್‌ ಅವರ ಅನಿಸಿಕೆ.

‘ಈ ಪ್ರಕರಣದಲ್ಲಿ ಆಯ್ಕೆ ವಂಚಿತ ಅಭ್ಯರ್ಥಿಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದು ಉತ್ತಮ ಮಾರ್ಗ’  ಎನ್ನುತ್ತಾರೆ ಕೊತ್ವಾಲ್‌.

* ಸಿಐಡಿ ತನಿಖೆಯಲ್ಲಿ ಹೆಸರಿಸಲಾಗಿರುವ ಅಭ್ಯರ್ಥಿಗಳ ವಿರುದ್ಧವಾದರೂ  ಸರ್ಕಾರ ರಿಟ್ ಅರ್ಜಿ ಸಲ್ಲಿಸಬೇಕಿತ್ತು
-ರಹಮತ್‌ಉಲ್ಲಾ ಕೊತ್ವಾಲ್‌, ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.