ADVERTISEMENT

ಪ್ರಾತಿನಿಧಿಕ ಕಲೆಯಾಗಿ ಯಕ್ಷಗಾನಕ್ಕೆ ಮನ್ನಣೆ ಅಗತ್ಯ: ಮೋಹನ ಆಳ್ವ

​ಪ್ರಜಾವಾಣಿ ವಾರ್ತೆ
Published 5 ಜೂನ್ 2016, 19:28 IST
Last Updated 5 ಜೂನ್ 2016, 19:28 IST
-ಡಾ. ಎಂ. ಮೋಹನ ಆಳ್ವ
-ಡಾ. ಎಂ. ಮೋಹನ ಆಳ್ವ   

ಮಂಗಳೂರು: ಒಡಿಶಾದಲ್ಲಿ ಒಡಿಸ್ಸಿ ಕಲಾಪ್ರಕಾರವನ್ನು ನೆರೆಯ ಕೇರಳದಲ್ಲಿ ಕಥಕ್ಕಳಿಯನ್ನು, ತಮಿಳುನಾಡಿನಲ್ಲಿ ತಿರುಕೂತ್ತು ಕಲೆಯನ್ನು ಪ್ರಾತಿನಿಧಿಕ ಕಲೆಯನ್ನಾಗಿ ಅಲ್ಲಿನ ಸರ್ಕಾರಗಳು ಒಪ್ಪಿಕೊಂಡಿರುವಾಗ ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಶಾಸ್ತ್ರೀಯ ಕಲೆಯಾದ ಯಕ್ಷಗಾನಕ್ಕೆ ಮನ್ನಣೆ ನೀಡಲು ಸರ್ಕಾರ ಹಿಂದೇಟು ಹಾಕಬಾರದು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಭಾನುವಾರ ಹಿರಿಯ ಭಾಗವತರಾದ ಪದ್ಯಾಣ ಗಣಪತಿ ಭಟ್‌ ಅವರಿಗೆ ಗೌರವ ಸಲ್ಲಿಸುವ ‘ಪದಯಾನ’ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರವು ಸಮರ್ಪಕವಾದ ಸಾಂಸ್ಕೃತಿಕ ನೀತಿಯನ್ನು ರೂಪಿಸಲು ವಿಳಂಬ ಮಾಡಬಾರದು ಎಂದರು.

ತೆಂಕು, ಬಡಗು ಎಂಬ ಭೇದವಿಲ್ಲದೆ ಯಕ್ಷಗಾನ ಕಲೆಯು ಹಳ್ಳಿಯಿಂದ ದಿಲ್ಲಿವರೆಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ವಿಸ್ತಾರವಾದ ಮತ್ತು ವೈವಿಧ್ಯವಾದ ಪ್ರೇಕ್ಷಕರನ್ನು ಹೊಂದಿದೆ. ಆದರೆ ಅದರ ಕಲಿಕೆಗೆ ಸಂಗೀತ ನೃತ್ಯದ ಕಲಿಕೆಯ ಮಾದರಿಯಲ್ಲಿ ವ್ಯವಸ್ಥೆಯನ್ನು ಇನ್ನೂ ರೂಪಿಸುವುದು ಸಾಧ್ಯವಾಗಿಲ್ಲ.

ಆದ್ದರಿಂದ ಡಿಪ್ಲೊಮಾ ಕೋರ್ಸ್‌ ಅಥವಾ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ರೂಪಿಸಬೇಕಾಗಿದೆ. ಸಂಗೀತ ನೃತ್ಯದಲ್ಲಿ ಇರುವಂತೆಯೇ ಜೂನಿಯರ್‌, ಸೀನಿಯರ್‌  ವಿದ್ವತ್‌ನಂತಹ ಗ್ರೇಡ್‌ಗಳನ್ನು ನೀಡುವ ಶೈಲಿಯಲ್ಲಾದರೂ ಕಲಿಕೆಯ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕ್ಷೇತ್ರದ ಹಿರಿಯರ, ವಿದ್ವಾಂಸರ ಸಭೆಯೊಂದನ್ನು ಸದ್ಯದಲ್ಲಿಯೇ ಕರೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.