ADVERTISEMENT

ಬಳ್ಳಾರಿಯಲ್ಲಿ ಇಬ್ಬರ ಸಾವು

ಹೆಚ್ಚುತ್ತಿರುವ ಬಿಸಿಲಿನ ತಾಪ ಶಂಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ಬಳ್ಳಾರಿ: ಜಿಲ್ಲೆಯಲ್ಲಿ ಇಬ್ಬರು ಹಿರಿಯ ನಾಗರಿಕರು ಬುಧವಾರ ಮೃತಪಟ್ಟಿದ್ದು, ಬಿಸಿಲಿನ ತಾಪ ತಾಳಲಾರದೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಳ್ಳಾರಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಕಾಕುಮನೆ ಸುಬ್ಬಮ್ಮ (82) ಹಾಗೂ ಹೂವಿನಹಡಗಲಿ ತಾಲ್ಲೂಕಿನ ಹಗರನೂರು ಗ್ರಾಮದ ದೊಡ್ಡಮನಿ ರಾಮಪ್ಪ (80) ಮೃತರು.

‘ಸುಬ್ಬಮ್ಮ ಶ್ವಾಸಕೋಶ ಸಂಬಂಧಿ ಸೋಂಕಿನ ಕಾಯಿಲೆಯಿಂದ ಬಳಲುತ್ತಿದ್ದರು. ಸೋಂಕು ಹೆಚ್ಚಾದ ಪರಿಣಾಮ ಮೃತಪಟ್ಟಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.

‘ಆಸ್ತಮಾ ರೋಗಿಗಳಿಗೆ ಬೇಸಿಗೆ ಕಾಲದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಅವರಿಗೆ ಮಳೆ ಮತ್ತು ಚಳಿಗಾಲದಲ್ಲಿ ಮಾತ್ರ ಉಸಿರಾಟದ ತೊಂದರೆಯಾಗುತ್ತದೆ. ಹಾಗಾಗಿ ಅವರು ಬಿಸಿಲಿನಿಂದ ಸಾವನ್ನಪ್ಪಿಲ್ಲ’ ಎಂದು ಹೇಳಿದ್ದಾರೆ.

‘ನನ್ನ ತಂದೆ ಮನೆ ಎದುರಿನ ಹುಣಸೆ ಮರದಡಿ ವಿಶ್ರಾಂತಿ ಪಡೆಯುತ್ತಿದ್ದರು. ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ಅಲ್ಲೆ ಕುಸಿದು ಬಿದ್ದರು. ಬಳಿಕ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ’ ಎಂದು ಹಗರನೂರು ಗ್ರಾಮದ ರಾಮಪ್ಪ ಅವರ ಪುತ್ರ ಕೊಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಗರನೂರಿನಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಬಿಸಿಲಿನಿಂದಲೇ ಮೃತಪಟ್ಟಿದ್ದಾರೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಈ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪಿ.ಬದ್ಯಾ ನಾಯ್ಕ ಹೇಳಿದರು.

‘ಈ ಬಗ್ಗೆ ಪ್ರಕರಣ ದಾಖಲಾಗಿ ಮರಣೋತ್ತರ ಪರೀಕ್ಷೆ ನಡೆದಿದ್ದರೆ ಸರಿಯಾದ ಕಾರಣ ಗೊತ್ತಾಗುತ್ತಿತ್ತು’ ಎಂದು ತಹಶೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.

ಹದಿನೆಂಟು ವರ್ಷಗಳ ದಾಖಲೆ ಸರಿಗಟ್ಟಿದ ತಾಪಮಾನ
ಧಾರವಾಡ: ‘ಜಿಲ್ಲೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುಮುಖವಾಗುತ್ತಲೇ ಇದ್ದು, ಹದಿನೆಂಟು ವರ್ಷಗಳ ನಂತರ ಉಷ್ಣತೆ 40ಡಿಗ್ರಿ ದಾಟಿರುವುದು ದಾಖಲಾಗಿದೆ’ ಎಂದು ಕೃಷಿ ವಿವಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ಯೋಜನೆಯ ಡಾ. ಯು.ಕೆ.ಹುಲಿಹಳ್ಳಿ ಹೇಳಿದ್ದಾರೆ.

ಏಪ್ರಿಲ್ ತಿಂಗಳ 14ರಂದು 40ಡಿಗ್ರಿ ತಾಪಮಾನ ದಾಖಲಾಗಿತ್ತು. ನಂತರದಲ್ಲಿ ಏ.26ರಂದು 40.1ಡಿಗ್ರಿ, ಏ.27ರಂದು 40ಡಿಗ್ರಿ ತಾಪಮಾನ ದಾಖಲಾಗಿದೆ. ಆದರೆ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಇಷ್ಟು ತಾಪಮಾನ ಇರಲಿಲ್ಲ. ಈ ಹಿಂದೆ 1998ರ ಏಪ್ರಿಲ್‌ 21 ಹಾಗೂ 22ರಂದು 40ಡಿಗ್ರಿ ತಾಪಮಾನ ದಾಖಲಾಗಿತ್ತು’ ಎಂದು ತಿಳಿಸಿದ್ದಾರೆ. ‘ಬಿಸಿಲು ವಾತಾವರಣ ಮುಂದುವರೆಯಲಿದ್ದು ಆಗಾಗ ಅಕಾಲಿಕ ಮಳೆ ಬೀಳುವ ಸಾಧ್ಯತೆ ಇದೆ’ ಎಂದು ಡಾ. ಹುಲಿಹಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT