ADVERTISEMENT

ಬಾಹುಬಲಿ–2 ವಿವಾದ ಅಂತ್ಯ

ಹೋರಾಟ ಹಿಂಪಡೆದ ಕನ್ನಡಪರ ಸಂಘಟನೆಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 19:26 IST
Last Updated 22 ಏಪ್ರಿಲ್ 2017, 19:26 IST
ಬಾಹುಬಲಿ–2 ವಿವಾದ ಅಂತ್ಯ
ಬಾಹುಬಲಿ–2 ವಿವಾದ ಅಂತ್ಯ   

ಬೆಂಗಳೂರು: ‘ಬಾಹುಬಲಿ-2’ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ವಿವಾದಕ್ಕೆ ತೆರೆಬಿದ್ದಿದೆ. ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಕನ್ನಡ ಹೋರಾಟಗಾರರು ಸಮ್ಮತಿಸಿದ್ದು, ಏಪ್ರಿಲ್‌ 28 ರಂದು ಕರೆ ನೀಡಲಾಗಿದ್ದ ‘ಬೆಂಗಳೂರು ಬಂದ್’ ಹಿಂಪಡೆಯಲಾಗಿದೆ.

ಶನಿವಾರ ಬೆಳಿಗ್ಗೆ ಸಭೆ ಸೇರಿದ್ದ ಕನ್ನಡ ಪರ ಸಂಘಟನೆಗಳು, ನಟ ಸತ್ಯರಾಜ್‌ ಕ್ಷಮಾಪಣೆಯ ಹಿನ್ನೆಲೆಯಲ್ಲಿ ‘ಬಾಹುಬಲಿ–2’ ಸಿನಿಮಾ ವಿರುದ್ಧ ಹೋರಾಟವನ್ನು ನಿಲ್ಲಿಸಲು ನಿರ್ಧರಿಸಿವೆ. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ ಮತ್ತು  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ‘ನಟ ಸತ್ಯರಾಜ್‌ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಎಂದು ಹೇಳಿದ್ದೆವು. ಕನ್ನಡ ಚಿತ್ರಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದ ಹಾಗೆ ಸತ್ಯರಾಜ್‌ ಕ್ಷಮಾಪಣೆ ಕೇಳಿದ್ದಾರೆ. ಆದ್ದರಿಂದ ಬಾಹುಬಲಿ–2 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ಅವಕಾಶ ನೀಡಲಾಗುವುದು. ಬಂದ್‌ ಅನ್ನೂ ಸಹ ಹಿಂಪಡೆಯಲಾಗಿದೆ’ ಎಂದು ಹೇಳಿದರು.

‘ಸತ್ಯರಾಜ್‌ ಇನ್ನು ಮುಂದೆ ಕನ್ನಡದ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಲಿ, ಬಾಯಿಯನ್ನು ಭದ್ರವಾಗಿರಿಸಿಕೊಳ್ಳಲಿ’ ಎಂದು ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿ ಮಾತನಾಡಿದ ಸಾ.ರಾ. ಗೋವಿಂದು, ‘ಪದೇ ಪದೇ ಹೀಗೆ ಅವಹೇಳನಕಾರಿ ಮಾತುಗಳನ್ನು ಆಡುವುದು, ನಂತರ ಕ್ಷಮೆ ಕೇಳುವುದು ಸರಿಯಲ್ಲ. ನಟರಿಗಷ್ಟೇ ಅಲ್ಲ, ಎಲ್ಲರಿಗೂ ಇದೊಂದು ಎಚ್ಚರಿಕೆಯ ಪಾಠವಾಗಬೇಕು. ಹೋರಾಟ ಎಲ್ಲ ಕಡೆಗಳಲ್ಲಿಯೂ ನಡೆಯುತ್ತದೆ. ಆದರೆ ಇನ್ನೊಂದು ರಾಜ್ಯದ ಜನತೆಯ ಬಗ್ಗೆ ಮಾತನಾಡುವಾಗ ಸಭ್ಯತೆಯ ಗಡಿ ಮೀರಬಾರದು’ ಎಂದು ಹೇಳಿದ್ದಾರೆ. ಇದರಿಂದ ಬಾಹುಬಲಿ ವಿವಾದ ಅಂತ್ಯ ಕಂಡಂತಾಗಿದ್ದು, ಬಿಡುಗಡೆಗೆ ಇದ್ದ ಕೊನೆಯ ಆತಂಕವೂ ನಿವಾರಣೆಯಾಗಿದೆ.

ಕನ್ನಡ ಚಿತ್ರಗಳ ಪ್ರದರ್ಶನ ರದ್ದು ಕೇವಲ ವದಂತಿ: ‘ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂಬುದು ಕೇವಲ ವದಂತಿ. ಅದರಲ್ಲಿ ಸತ್ಯಾಂಶವಿಲ್ಲ’ ಎಂದು ಸಾ.ರಾ. ಗೋವಿಂದು ಸ್ಪಷ್ಟಪಡಿಸಿದ್ದಾರೆ.

‘ಸತ್ಯರಾಜ್‌ ಕ್ಷಮೆ ಕೇಳಿದ ನಂತರ ಯಾರೋ ಕಿಡಿಗೇಡಿಗಳು ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಗಿಮಿಕ್‌ ಮಾಡಿದ್ದಾರೆ. ನಾನು ತಕ್ಷಣವೇ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೇನೆ. ಅವರು ‘ಯಾವುದೇ ಕಾರಣಕ್ಕೂ ಕನ್ನಡ ಚಿತ್ರಗಳನ್ನು ತಮಿಳುನಾಡಿನಲ್ಲಿ ನಿಷೇಧಿ ಸಿಲ್ಲ. ನಿಷೇಧಿಸುವ ಯೋಚನೆಯೂ ಇಲ್ಲ. ಒಂದು ವೇಳೆ ಯಾವುದಾದರೂ ಕನ್ನಡ ಚಿತ್ರಗಳನ್ನು ನಿಷೇಧ ಮಾಡಿದರೆ ಅದರ ಸಂಪೂರ್ಣ ಹೊಣೆಯನ್ನು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಹೊರುತ್ತದೆ. ಅಂಥ ಪರಿಸ್ಥಿತಿ ಎದುರಾಗಲು ಅವಕಾಶ ನೀಡುವುದಿಲ್ಲ ಎಂದು ಸ್ಷಷ್ಟಪಡಿಸಿದ್ದಾರೆ’ ಎಂದು ಗೋವಿಂದು ಖಚಿತಪಡಿಸಿದ್ದಾರೆ.

‘ಒಂದೊಮ್ಮೆ ಹಾಗೇನಾದರೂ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ನಿಷೇಧ ಆಗಿದ್ದು ಖಚಿತವಾದರೆ ಕರ್ನಾಟದಲ್ಲಿ ಸಂಪೂರ್ಣವಾಗ ತಮಿಳು ಚಿತ್ರಗಳನ್ನು ನಿಷೇಧಿಸಲಾಗುತ್ತದೆ’ ಎಂದೂ ಅವರು ಎಚ್ಚರಿಕೆ ನೀಡಿದರು.

ಕನ್ನಡ ಚಿತ್ರಗಳ ಪ್ರದರ್ಶನ ರದ್ದು ಕೇವಲ ವದಂತಿ
‘ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂಬುದು ಕೇವಲ ವದಂತಿ. ಅದರಲ್ಲಿ ಸತ್ಯಾಂಶವಿಲ್ಲ’ ಎಂದು ಸಾ.ರಾ. ಗೋವಿಂದು ಸ್ಪಷ್ಟಪಡಿಸಿದ್ದಾರೆ.

‘ಈಗ ದೊಡ್ಡದು ಮಾಡಬೇಕಿರಲಿಲ್ಲ’

ವಿಜಯಪುರ: ‘ತಮಿಳು ಚಿತ್ರನಟ ಸತ್ಯರಾಜ್‌ 9 ವರ್ಷಗಳ ಹಿಂದೆ ಕನ್ನಡಿಗರ ವಿರುದ್ಧ ನೀಡಿದ್ದ ಹೇಳಿಕೆ ಬೇಜವಾಬ್ದಾರಿತನದ್ದು. ಆದರೆ, ವಾಟಾಳ್ ನಾಗರಾಜ್‌ ಅದನ್ನು ಈಗ ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ’ ಎಂದು ಚಲನಚಿತ್ರ ನಿರ್ದೇಶಕ ಯೋಗೇಶ ಮಾಸ್ಟರ್‌ ಅಭಿಪ್ರಾಯಪಟ್ಟರು.
‘ಸತ್ಯರಾಜ್‌ ಹೇಳಿಕೆ ತಪ್ಪು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ವ್ಯಕ್ತಿಯ ಹೇಳಿಕೆ ಪರಿಗಣಿಸಿ ಬಾಹುಬಲಿ–2 ಚಿತ್ರ ಬಿಡುಗಡೆಯನ್ನು ವಿರೋಧಿಸುವುದು ಎಷ್ಟು ಸರಿ? ಎರಡು ರಾಜ್ಯಗಳ ನಡುವೆ ಬಾಂಧವ್ಯ ನಿರ್ಮಿಸುವ ಕೆಲಸವಾಗಬೇಕೇ ಹೊರತು ಹಾಳು ಮಾಡುವುದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.