ADVERTISEMENT

ಬಿಜೆಪಿ ಪಟ್ಟಿ ಇಂದು, ಕಾಂಗ್ರೆಸ್ ಪಟ್ಟಿ ನಾಳೆ?

ಪರಿಷತ್‌ ಚುನಾವಣೆ: ಪಕ್ಷಗಳಲ್ಲಿ ಬಿರುಸು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 18:31 IST
Last Updated 30 ನವೆಂಬರ್ 2015, 18:31 IST

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಗೆ ಹೈಕಮಾಂಡ್‌ ಒಪ್ಪಿಗೆ ಪಡೆಯುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಮಂಗಳವಾರ ಸಂಜೆ ನವದೆಹಲಿಗೆ ತೆರಳಲಿದ್ದಾರೆ.ಇಬ್ಬರೂ ಸೋಮವಾರ  ಒಂದು ತಾಸು ಸಭೆ ಸೇರಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದರು. 

ದೆಹಲಿಯಲ್ಲಿ ಅವರು ರಾಜ್ಯದ ಉಸ್ತುವಾರಿ ದಿಗ್ವಿಜಯ ಸಿಂಗ್‌ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ ಅವರನ್ನು ಬುಧವಾರ ಭೇಟಿ ಮಾಡಿ ಟಿಕೆಟ್‌ ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸ್ಪರ್ಧಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಳ್ಳಕೆರೆ
ಯಲ್ಲಿ ತಿಳಿಸಿದರು.

ಬಿಜೆಪಿ ಅಂತಿಮ ಪಟ್ಟಿ ಇಂದು?: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ ಸಂಬಂಧ ಬಿಜೆಪಿ ಈಗಾಗಲೇ 12 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಇನ್ನುಳಿದ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸ್ಥಳೀಯ ಸಂಸ್ಥೆ ಕ್ಷೇತ್ರಗಳ 12  ಅಭ್ಯರ್ಥಿಗಳು ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರ, ವಾಯವ್ಯ  ಪದವೀಧರರ ಕ್ಷೇತ್ರದ ಅಭ್ಯರ್ಥಿಗಳ  ಪಟ್ಟಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಈಗಾಗಲೇ ಒಪ್ಪಿಗೆ ನೀಡಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ಒಟ್ಟು 25 ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ. ಈ ಪೈಕಿ  ದಕ್ಷಿಣ ಕನ್ನಡ– ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ಐದು ಕ್ಷೇತ್ರಗಳಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಆಯ್ಕೆ ಆಗಲಿದ್ದಾರೆ.  ಇಲ್ಲಿ ಪಕ್ಷದ ಬಲಾಬಲ ನೋಡಿಕೊಂಡು ತಲಾ ಒಬ್ಬರನ್ನು ಮಾತ್ರ ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ.  

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ತುಮಕೂರು ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಪೂರ್ಣಗೊಂಡಿಲ್ಲ.  ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಲುವಾಗಿ ಪಕ್ಷದ ಚುನಾವಣಾ ಸಮಿತಿ ಮಂಗಳವಾರ ಮತ್ತೆ ಸಭೆ ಸೇರಲಿದೆ. ಈ ಜಿಲ್ಲೆಗಳ ಮುಖಂಡರನ್ನೂ ಸಭೆಗೆ ಆಹ್ವಾನಿಸಲಾಗಿದೆ.

‘ಬೆಂಗಳೂರು ಆಸುಪಾಸಿನ ಜಿಲ್ಲೆಗಳ   ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮಂಗಳವಾರ ಸಿದ್ಧಪಡಿಸಲಾಗುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.ಜೆಡಿಎಸ್‌ ಪಟ್ಟಿ: ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಕುರಿತು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಚರ್ಚೆ ನಡೆಸಿದರು. ಅಭ್ಯರ್ಥಿಗಳ ಪಟ್ಟಿ ಬುಧ
ವಾರ ಅಥವಾ ಶುಕ್ರವಾರ ಬಿಡುಗಡೆ ಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.