ADVERTISEMENT

ಬೂದಿನಾಳ: ವಾಮಾಚಾರಕ್ಕೆ ಬಾಲಕಿ ಬಲಿ

ನಿಧಿ ಆಸೆಗೆ ಕೊಲೆ: ಪೋಷಕರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2016, 19:30 IST
Last Updated 4 ಅಕ್ಟೋಬರ್ 2016, 19:30 IST
ಬೂದಿನಾಳ: ವಾಮಾಚಾರಕ್ಕೆ ಬಾಲಕಿ ಬಲಿ
ಬೂದಿನಾಳ: ವಾಮಾಚಾರಕ್ಕೆ ಬಾಲಕಿ ಬಲಿ   

ಯಾದಗಿರಿ: ಶಹಾಪುರ ತಾಲ್ಲೂಕಿನ ಬೂದಿನಾಳ ಗ್ರಾಮದಲ್ಲಿ ಬಸಯ್ಯ ಸ್ವಾಮಿ ಎಂಬವರ ಪುತ್ರಿ ಅಮೃತಾಳ (18 ತಿಂಗಳು) ಶವ ಸೋಮವಾರ ರಾತ್ರಿ ಅವರ ಮನೆಯ ಹಿಂಭಾಗದ ಬಾವಿಯಲ್ಲಿ ಪತ್ತೆಯಾಗಿದೆ.

‘ಮಗುವಿನ ಶವ ಸಿಕ್ಕ ಬಾವಿಯ ಬಳಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ನಿಧಿ ಆಸೆಗೆ ಮಗುವನ್ನು ಬಲಿ ನೀಡಲಾಗಿದೆ’ ಎಂದು ಪೋಷಕರು ಆರೋಪಿಸಿದ್ದಾರೆ. ಬಸಯ್ಯ ಸ್ವಾಮಿ ಮತ್ತು ಲಕ್ಷ್ಮಿ ದಂಪತಿಯ ಇಬ್ಬರು ಪುತ್ರಿಯರ ಪೈಕಿ ಅಮೃತಾ ಎರಡನೆಯವಳು.

‘ಸೋಮವಾರ ರಾತ್ರಿ ತಾಯಿಯ ಪಕ್ಕದಲ್ಲಿ ಮಲಗಿದ್ದ  ಮಗು ದಿಢೀರನೇ ನಾಪತ್ತೆಯಾಗಿದೆ. ತಾಯಿ ಲಕ್ಷ್ಮಿಗೆ ಬೆಳಗಿನ ಜಾವ ಮೂರು ಗಂಟೆ ವೇಳೆ ಎಚ್ಚರವಾದಾಗ ಮಗು ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮನೆಯ ಎಲ್ಲ ಸದಸ್ಯರು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ, ಮಗು ಮನೆಯ ಹಿಂಭಾಗದ ಪಾಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ’ ಎಂದು ತಿಳಿಸಲಾಗಿದೆ.

ನಿಧಿ ಆಸೆಗೆ ಬಲಿ:  ಪೋಷಕರು ಮಗುವನ್ನು ಹುಡುಕುವ ವೇಳೆ ಮನೆಯ ಹಿಂಭಾಗದಲ್ಲಿ ಅರಿಷಿಣ, ಕುಂಕುಮ, ಅಕ್ಕಿ ಸೇರಿದಂತೆ ವಾಮಾಚಾರಕ್ಕೆ ಬಳಸುವ ಒಂದಿಷ್ಟು ವಸ್ತುಗಳು ಸಿಕ್ಕಿವೆ. ತಮ್ಮ ಮಗುವನ್ನು ನಿಧಿಯ ಆಸೆಗೆ ಬಲಿ ನೀಡಿರಬಹುದು ಎಂದು ಮಗುವಿನ ಅಜ್ಜ ರಾಚಯ್ಯ ಆರೋಪಿಸಿದರು. 

‘ಮನೆಯ ಹಿಂಭಾಗದಲ್ಲಿ ವಾಮಾಚಾರದ ವಸ್ತುಗಳು ಬಿದ್ದಿರುವುದು ಸೋಮವಾರ ರಾತ್ರಿಯೇ ಕುಟುಂಬದ ಕೆಲ ಸದಸ್ಯರು ನೋಡಿದ್ದಾರೆ. ಬೆಳಿಗ್ಗೆ ಅದನ್ನು ಸ್ವಚ್ಛ ಮಾಡಿದರಾಯಿತು ಎಂದು ಸುಮ್ಮನಾಗಿದ್ದರಂತೆ ಅಷ್ಟರಲ್ಲಿ ಹೀಗೆ ಆಗಿದೆ’ ಎಂದು ಮಗುವಿನ ಸಂಬಂಧಿ ಶಶಿ ಸ್ವಾಮಿ ಹೇಳಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಮೇಲ್ನೋಟಕ್ಕೆ ವಾಮಾಚಾರ ಎನ್ನಲಾಗುತ್ತಿದೆಯಾದರೂ, ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ  ಅಂತಿಮ ನಿರ್ಧಾರಕ್ಕೆ ಬರಲಾಗುವುದು’ ಎಂದು ಅವರು ತಿಳಿಸಿದರು.

ಹಲವು ಅನುಮಾನ:  ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗು ದಿಢೀರನೆ ಕಾಣೆಯಾಗಿ ಬಾವಿಯಲ್ಲಿ  ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ಆರು ಮಂದಿ ಮಲಗಿದ್ದರು. ಹೀಗಿದ್ದರೂ ಮಗು ಹೊರಗೆ ಹೋಗಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.