ADVERTISEMENT

ಬೆಳೆ ಹಾನಿ: ಪರಿಹಾರದ ದುಡ್ಡು ಉದುರುತ್ತಾ?

ಸುದ್ದಿಗಾರರ ಪ್ರಶ್ನೆಗೆ ಸಚಿವ ಶಾಮನೂರು ಶಿವಶಂಕರಪ್ಪ ಉತ್ತರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಗಂಗಾವತಿ (ಕೊಪ್ಪಳ ಜಿಲ್ಲೆ): ‘ರೀ ಸ್ವಾಮಿ ರೈತರಿಗೆ ಎಷ್ಟು ಹಾನಿಯಾಗಿದೆ, ಎಷ್ಟು ಮೊತ್ತದ ಪರಿಹಾರ ಕೇಳುತ್ತಿದ್ದಾರೆ ಎಂಬ ಎಲ್ಲಾ ವಿಷಯ ನಂಗೊತ್ತು. ಎಲ್ಲರೂ ಕೇಳಿದ ತಕ್ಷಣ ಪರಿಹಾರ ನೀಡೋಕೆ ದುಡ್ಡೇನಾದರೂ ಮೇಲಿಂದ ಉದುರುತ್ತಾ ಅಥವಾ ನನ್ನ ಮನೆಯಿಂದ ಏನಾದರೂ ತಂದು ಕೊಡಬೇಕಾ...?’

ಬೆಳೆ ಹಾನಿಯ ಬಗ್ಗೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ತೋಟಗಾರಿಕೆ, ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪರಿಂದ ಬಂದ ಉತ್ತರ ಇದು. ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಸಚಿವರನ್ನು ಸುದ್ದಿಗಾರರು ಹೆಲಿಪ್ಯಾಡ್‌ನಲ್ಲಿ ಭೇಟಿಯಾದರು. ಈ ಭಾಗದಲ್ಲಿ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಪರಿಹಾರ ಕ್ರಮಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.

ಸುದ್ದಿಗಾರರೊಬ್ಬರ ಪ್ರಶ್ನೆಯಿಂದ ಅಸಮಾಧಾನಗೊಂಡ ಸಚಿವರು, ‘ನೀವೇನು ಮನುಷ್ಯರೋ’ ಎಂದು ಕೇಳಿದರು. ಆಗ ಸುತ್ತಲಿನ ಜನ ಸಮಾಧಾನ ಪಡಿಸಿದರು. ಬಳಿಕ ‘ರೀ ವರದಿ ಬರ್ಲಿರೀ.. ವರದಿ ಬಂದ ಮೇಲೆ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಕೈಗೊಳ್ತಾರ. ಅದಕ್ಕೂ ಮುನ್ನ ನನ್ನ ಕೇಳಿದ್ರ ನನ್ನ ಮನೆಯಿಂದ ಹಣ ತಗೊಂಡು ನಿಮ್ಮ ಮನೆ ಬಾಗಿಲಿಗೆ ಬಂದು ಕೊಡಾಕ ಆಗ್ತದೇನು?’ ಎಂದರು.

ಈ ಮಧ್ಯೆ, ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ಪ್ರತ್ಯೇಕವಾಗಿ ಸಚಿವರಿಗೆ ಮನವಿ ಸಲ್ಲಿಸಿದರು. ಕೇಂದ್ರದ ಮಾಜಿ ಸಚಿವ ಕೆ.ಸಿ. ಕೊಂಡಯ್ಯ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಇದ್ದರು.
*
ಮುಖ್ಯಾಂಶಗಳು
*ಪರಿಹಾರ ಕುರಿತ ಪ್ರಶ್ನೆಗೆ ಸಚಿವರ ಸಿಡಿಮಿಡಿ
*ಸಚಿವ ಶಾಮನೂರು ವಿರುದ್ಧ ರೈತರ ಆಕ್ರೋಶ
*ನಾನೇನು ಮನೆಯಿಂದ ಕೊಡ್ಲಾ: ಮರು ಪ್ರಶ್ನೆ
*
ಸಿಎಂ ಬಂದಾಗ ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಬಹುದು ಎಂದು ಭಾವಿಸಿದ್ದೆವು. ಅದು ಸುಳ್ಳಾದಾಗ ಬಂದವರನ್ನೆಲ್ಲಾ ಪರಿಹಾರ ಕೇಳುವ ಸ್ಥಿತಿ ಎದುರಾಗಿದೆ
ಪೀರಸಾಬ ಜಾನೆಕಲ್
ಸಂತ್ರಸ್ತ ರೈತ, ಬಸವಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.