ADVERTISEMENT

ಬೊಮ್ಮಾಯಿ– ಖಮರುಲ್‌ ನಡುವೆ ತೀವ್ರ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ಹೈದರಾಬಾದ್‌– ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಅನುದಾನ ಬಳಕೆ ವಿಚಾರ ಬಿಜೆಪಿಯ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಖಮರುಲ್‌ ಇಸ್ಲಾಂ ನಡುವೆ ಶುಕ್ರವಾರ ವಿಧಾನಸಭೆಯಲ್ಲಿ ವಾಕ್ಸಮರಕ್ಕೆ ಕಾರಣವಾಯಿತು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ ಎಚ್‌ಕೆಡಿಬಿ ವಿಷಯ ಪ್ರಸ್ತಾಪಿಸಿದ ಬೊಮ್ಮಾಯಿ, ‘ಬಜೆಟ್‌ನಲ್ಲಿ ಮಂಡಳಿಗೆ ಘೋಷಿಸುವ ಅನುದಾನವನ್ನು ‍ಪೂರ್ಣವಾಗಿ ಬಿಡುಗಡೆ ಮಾಡುತ್ತಿಲ್ಲ. ಸಂವಿಧಾನದ ಕಲಂ 371 (ಜೆ)ಗೆ ತಿದ್ದುಪಡಿ ತಂದಿರುವುದು ವ್ಯರ್ಥವಾಗಿದೆ. ಸರ್ಕಾರ ಈ ವಿಷಯದಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಜನರಿಗೆ ವಂಚಿಸುತ್ತಿದೆ’ ಎಂದು ಆರೋಪಿಸಿದರು.

‘ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡುತ್ತೀರಿ. ಆದರೆ, ಶೇಕಡ 80ರಷ್ಟೂ ಬಿಡುಗಡೆ ಆಗುವುದಿಲ್ಲ. ಬಳಕೆಯ ಮಾತು ಬೇರೆಯೇ ಇದೆ. ಕಾರಣ ಕೇಳಿದರೆ ನಿಯಮಗಳ ತೊಡಕು ಹೇಳಲಾಗುತ್ತಿದೆ. ಎಚ್‌ಕೆಡಿಬಿಯಲ್ಲಿ ಸರಿಯಾಗಿ ಕೆಲಸವೇ ನಡೆಯುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ತಕ್ಷಣ ಮಧ್ಯ ಪ್ರವೇಶಿಸಿದ ಎಚ್‌ಕೆಡಿಬಿ ಅಧ್ಯಕ್ಷರೂ ಆಗಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್‌ ಇಸ್ಲಾಂ, ‘ಸುಮ್ಮನೆ ಆರೋಪ ಮಾಡಬೇಡಿ. ಬಜೆಟ್‌ನಲ್ಲಿ ಘೋಷಿಸಿದಂತೆ ಅನುದಾನ ಬಿಡುಗಡೆ ಆಗುತ್ತಿದೆ. ನಿಯಮಗಳಿಗೆ ವಿರುದ್ಧವಾಗಿ ಹಣ ಬಿಡುಗಡೆಗೆ ಅವಕಾಶ ಇಲ್ಲ’ ಎಂದು ಏರಿದ ದನಿಯಲ್ಲಿ ಹೇಳಿದರು.

‘ನೀವು ಆ ಭಾಗದ ಜನರಿಗೆ ಮೋಸ ಮಾಡುತ್ತಿದ್ದೀರಿ’ ಎಂದು ಬೊಮ್ಮಾಯಿ ಹೇಳಿದರು. ‘ಶಾಸಕರು ಸರಿಯಾದ ಪ್ರಸ್ತಾವಗಳನ್ನು ಸಲ್ಲಿಸಿಲ್ಲ. ಇದರಿಂದಾಗಿ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ’ ಎಂದು ಸಚಿವರು ಪ್ರತ್ಯುತ್ತರಿಸಿದರು. ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ಮಾತನಾಡಿ, ‘ಬೊಮ್ಮಾಯಿ ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆ. ಅಧಿಕಾರಿಗಳು ಹಣ ಬಿಡುಗಡೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿದಷ್ಟು ಮೊತ್ತ ಬಳಕೆ ಆಗುತ್ತಿಲ್ಲ’ ಎಂದು ವಿರೋಧ ಪಕ್ಷದವರ ಬೆಂಬಲಕ್ಕೆ ನಿಂತರು.

‘ಸಚಿವರು ಶಾಸಕರ ವಿರುದ್ಧ ಆರೋಪ ಮಾಡಿದ್ದಾರೆ. ಈ ಹಕ್ಕು ಅವರಿಗೆ ಇಲ್ಲ. ಅಲ್ಲದೇ ಅವರು ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಅವರ ಹೇಳಿಕೆಯನ್ನು ಕಡತದಿಂದ ತೆಗೆಸಿಹಾಕಬೇಕು’ ಎಂದು ಕೆಜೆಪಿಯ ಬಿ.ಆರ್‌.ಪಾಟೀಲ ಆಗ್ರಹಿಸಿದರು.
ಬೊಮ್ಮಾಯಿ ಮತ್ತೆ ಜೋರು ದನಿಯಲ್ಲಿ ಸಚಿವರ ವಿರುದ್ಧ ಮಾತು ಆರಂಭಿಸಿದರು. ಅತ್ತ ಖಮರುಲ್‌ ಕೂಡ ಏರಿದ ದನಿಯಲ್ಲೇ ಉತ್ತರ ನೀಡತೊಡಗಿದರು. ಗದ್ದಲ ಹೆಚ್ಚುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್‌ ಕಾಗೋಡು ತಿಮ್ಮಪ್ಪ, ಎರಡೂ ಕಡೆಯವರ ಮಾತಿಗೆ ವಿರಾಮ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.